For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಭಯಾನಕ ಮುಖವಾಡದ ಹಿಂದೆ ನೆಚ್ಚಿನ ಗೆಳೆಯ!

ಭಯಾನಕ ಮುಖವಾಡದ ಹಿಂದೆ ನೆಚ್ಚಿನ ಗೆಳೆಯ!*

ಭಯಾನಕ ಮುಖವಾಡವನ್ನು ಕಂಡು ಗಾಬರಿಯಾದ, ಆದರೆ ಆನಂತರ ಅಸಾಮಾನ್ಯ ಎನಿಸಬಹುದಾದ ಪಾಠವೊಂದನ್ನು ಕಲಿತ ಒಂದು ನಿಜಜೀವನದ ಘಟನೆಯೊಂದು ಇಲ್ಲಿದೆ. ನಮ್ಮ ಸ್ವಾಮಿ ಪೂಜ್ಯ ದಾದಾ ಜೆ.ಪಿ. ವಾಸ್ವಾನಿ ಯವರು ಹೇಳಿದ ಘಟನೆ. 1925ರಲ್ಲಿ ನಾನಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದೆ. ನನ್ನ ಇಂಗ್ಲಿಷ್ ಉಪಾಧ್ಯಾಯರು ಕತೆ ಪುಸ್ತಕಗಳನ್ನು ಓದುವುದರಿಂದ ಭಾಷೆಯನ್ನು ಬೇಗ ಕಲಿಯಬಹುದು ಎಂದು ನಮಗೆ ತಿಳಿಸಿದರು. ನಾನು ಅಂತಹ ಪುಸ್ತಕವೊಂದನ್ನು ಹುಡುಕತೊಡಗಿದೆ.

ನನಗೆ ಗೋವಿಂದ ಎಂಬ ಹೆಸರಿನ ಗೆಳೆಯನಿದ್ದ. ನಾನು ಆತನನ್ನು ಯಾವುದಾದರೂ ಇಂಗ್ಲಿಷ್ ಭಾಷೆಯ ಸಣ್ಣ ಕತೆಗಳ ಪುಸ್ತಕಗಳಿದ್ದರೆ ನನಗೆ ಕೊಡಬೇಕೆಂದು ಕೇಳಿಕೊಂಡೆ. ಆತ ಆಯಿತು. ನಮ್ಮ ಮನೆಯಲ್ಲಿ ಒಂದು ಪುಸ್ತಕ ಇರಬಹುದು. ಅದನ್ನು ಹುಡುಕಿ, ಹೋಳಿ ಹಬ್ಬದ ರಜಾ ದಿನದಂದು ತಂದು ಕೊಡುತ್ತೇನೆ ಎಂದು ವಾಗ್ದಾನ ಮಾಡಿದ. ನಾನು ಹೋಳಿ ಹಬ್ಬದ ದಿನವನ್ನೇ ಸಡಗರ-ಸಂಭ್ರಮಗಳಿಂದ ನಿರೀಕ್ಷಿಸುತ್ತಿದ್ದೆ. ಅಂದು ನಮ್ಮ ಮನೆಯ ಮುಂಬಾಗಿಲನ್ನು ತಟ್ಟಿದ ಶಬ್ದವಾಯಿತು. ನನ್ನ ಸ್ನೇಹಿತನೇ ಬಂದಿರಬೇಕೆಂಬ ಕಾತುರತೆಯಿಂದ ನಾನು ಬಾಗಿಲು ತೆರೆದೆ. ಆದರೆ ಹೊರಗೆ ಕಂಡ ದೃಶ್ಯವನ್ನು ಕಂಡು ನಾನು ಕಿಟಾರನೆ ಕಿರುಚಿಕೊಂಡೆ. ಏಕೆಂದರೆ ಭಯಂಕರವಾದ ಸಿಂಹದ ಮುಖವಾಡ ಧರಿಸಿದ್ದವರೊಬ್ಬರು ನನಗೆ ಕಂಡರು.

ನಾನು ಭಯದಿಂದ ಕಿರುಚಿಕೊಳ್ಳುತ್ತಲೇ ಮನೆಯೊಳಕ್ಕೆ ಓಡಿಹೋದೆ. ಆಗ ಆ ಭಯಂಕರ ಮುಖವಾಡದ ಒಳಗಿನಿಂದ ನನಗೆ ಪರಿಚಯವಿರುವ ಮಧುರವಾದ ಧ್ವನಿ ಕೇಳಿಬಂತು. ಹೆದರಬೇಡ! ನಾನು ನಿನ್ನ ನೆಚ್ಚಿನ ಗೆಳೆಯ ಗೋವಿಂದ!  ತಮಾಷೆಗಾಗಿ ಸಿಂಹದ ಮುಖವಾಡವನ್ನು ಧರಿಸಿ ಬಂದಿದ್ದೇನೆ. ಇಲ್ಲಿ ಬಾ. ನೀನು ಬಯಸುತ್ತಿದ್ದ ಸಣ್ಣ ಕತೆಗಳ ಪುಸ್ತಕವನ್ನೂ ನಾನು ತಂದಿದ್ದೇನೆ ಎನ್ನುವ ಮಾತುಗಳು ಕೇಳಿಸಿದವು. ಆ ಧ್ವನಿಯನ್ನು ಕೇಳುತ್ತಲೇ ನನ್ನ ಹೆದರಿಕೆಯೆಲ್ಲ ಕರಗಿಹೋಯಿತು. ನನ್ನ ಪುಕ್ಕಲತನಕ್ಕೆ ನಾನೇ ನಕ್ಕುಬಿಟ್ಟೆ. ಓಡೋಡಿ ಹೋಗಿ ನನ್ನ ಗೆಳೆಯನನ್ನು ತಬ್ಬಿಕೊಂಡೆ.

ಮನೆಯೊಳಕ್ಕೆ ಬರಮಾಡಿಕೊಂಡೆ. ನಡೆದು ಬರುವಾಗ ಅವನು ಧರಿಸಿದ ಮುಖವಾಡವನ್ನು ಮುಟ್ಟಿ ನೋಡಿದೆ. ರಟ್ಟಿನ ಕಾಗದದ ಮೇಲೆ ಬಣ್ಣಬಣ್ಣದ ಚಿತ್ತಾರ ಬಿಡಿಸಿದ್ದ ಮುಖವಾಡ ಅದು! ನಾನು ಮುಟ್ಟುತ್ತಿದ್ದಂತೆ ಆ ಮುಖವಾಡ ಕೆಳಕ್ಕೆ ಬಿದ್ದು ಹೋಯಿತು. ನನ್ನ ನೆಚ್ಚಿನ ಗೆಳೆಯನ ಆಕರ್ಷಕ ಮುಖ ನನಗೆ ಕಾಣಿಸಿಕೊಂಡಿತು. ಆತನೂ ಗಟ್ಟಿಯಾಗಿ ನಗುತ್ತಿದ್ದ!  ಅಂದು ನಾನು ಕಲಿತ ಪಾಠದಿಂದಾಗಿ ನಾನು ಇಂದಿಗೂ ಬದುಕಿನಲ್ಲಿ ಯಾವುದೇ ಬಗೆಯ ಅಪಾಯ ಎದುರಾದರೂ ತೊಂದರೆ-ತಾಪತ್ರಯಗಳು ಬಂದೆರಗಿದರೂ ಅವನ್ನು ನೋಡಿ ಗಾಬರಿಯಾಗುವುದಿಲ್ಲ. ಅವು ಭಯಂಕರ ಮುಖವಾಡವನ್ನು ಧರಿಸಿರಬಹುದು. ಆದರೆ ಅವುಗಳ ಹಿಂದೆ ನಮಗೆ ಒಳ್ಳೆಯದನ್ನುಂಟು ಮಾಡುವ ಏನೋ ಒಂದು ಕೊಡುಗೆ ಅಡಗಿದೆ ಎಂದು ಭಾವಿಸುತ್ತೇನೆ. ಅನುಭವದಿಂದ ನಾನು ಕಂಡು ಕೊಂಡಿರುವ ಸತ್ಯವೇನೆಂದರೆ ನಮಗೆ ಆ ಸಮಸ್ಯೆಗಳು ಎದುರಾದ ತಕ್ಷಣ ಏನೋ ಬರಬಾರದ್ದು ಬಂದಿತೆಂದೂ, ಆಗಬಾರದ್ದು ಆಯಿತೆಂದೂ ಅಂದುಕೊಳ್ಳುತ್ತೇವೆ.

ಆದರೆ ಆ ಸಮಸ್ಯೆಗಳು ನಾವು ಅಂದುಕೊಂಡಷ್ಟು ತೀವ್ರವಾದ ತೊಂದರೆ ಯನ್ನುಂಟು ಮಾಡದೆ ಹೋಗಬಹುದು. ಅಥವಾ ಅವುಗಳು ನಮಗೆ ಒಂದು ಅಮೂಲ್ಯವಾದ ಪಾಠವನ್ನು ಕಲಿಸಬಹುದು. ದಾದಾ ವಾಸ್ವಾನಿಯವರಿಗೆ ಪ್ರಣಾಮಗಳು. ನಮಗೂ ಬದುಕಿನಲ್ಲಿ ಏನಾದರೂ ಸಮಸ್ಯೆ, ತೊಂದರೆ- ತಾಪತ್ರಯಗಳು ಎದುರಾದಾಗ ಮೇಲಿನ ಘಟನೆಯನ್ನು ಜ್ಞಾಪಿಸಿಕೊಳ್ಳಬಹುದು. ಅವನ್ನು ಧೈರ್ಯವಾಗಿ ಎದುರಿಸಬಹುದು.  ಮನಸ್ಸಿನಲ್ಲಿ ‘ಬಂದದ್ದೆಲ್ಲಾ ಬರಲೀ ಗೋವಿಂದನ ದಯೆ ಯೊಂದಿರಲಿ’ಎಂದು ಪ್ರಾರ್ಥಿಸಬಹುದು. ಅವು ಬಂದು ಹೋದ ಎಷ್ಟೋ ದಿನಗಳ, ವರ್ಷಗಳ ನಂತರ ಅವುಗಳನ್ನು ನೆನಪಿಸಿಕೊಂಡಾಗ ನಮ್ಮ ಮುಖದ ಮೇಲೆ ಒಂದು ಮುಗುಳ್ನಗೆ ಮಿಂಚಿದರೂ ಆಶ್ಚರ್ಯವಿಲ್ಲ, ಅಲ್ಲವೇ? ಭಯಾನಕ ಮುಖವಾಡದ ಹಿಂದೆ ನಮ್ಮ ನೆಚ್ಚಿನ ಗೆಳೆಯನಿರಬಹುದು! ಆತ ನಮಗೆ ಆನಂದವನ್ನು ತರಬಹುದು ಅಥವಾ ಪಾಠವೊಂದನ್ನು ಕಲಿಸಬಹುದು!

*ಕೃಪೆ :ಷಡಕ್ಷರಿ.*                                               ಸಂಗ್ರಹ: ವೀರೇಶ್ ಅರಸಿಕೆರೆ.
Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com