For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

"ಭಾರತಾಂಬೆಯ ಹೆಮ್ಮೆಯ ಪುತ್ರ ಡಾ.ಎಪಿಜೆ ಅಬ್ದುಲ್ ಕಲಾಂ"



"ಭಾರತಾಂಬೆಯ ಹೆಮ್ಮೆಯ ಪುತ್ರ ಡಾ.ಎಪಿಜೆ ಅಬ್ದುಲ್ ಕಲಾಂ"

ಅವರೊಬ್ಬ ಕರ್ಮಯೋಗಿ. ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಮಹಾ ಮೇಧಾವಿ. ಅವರು ಈ ದೇಶ ಕಂಡ ಅತ್ಯುತ್ತಮ ವಿಜ್ನಾನಿಗಳಲ್ಲೊಬ್ಬರು. ಚಿಕ್ಕ ಮಕ್ಕಳಿಂದ ಆರಂಭವಾಗಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಗುರು, ಶಿಕ್ಷಕ. ಸಹನೆ, ಸರಳತೆ, ಸಜ್ಜನಿಕೆಗೆ ಅತ್ಯುತ್ತಮ ಉದಾಹರಣೆ. ಅವರು ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಕೋಟ್ಯಾಂತರ ಯುವಕರಿಗೆ ಕನಸುಗಳನ್ನು ಕಟ್ಟಿಕೊಟ್ಟ, ದೇಶಕ್ಕಾಗಿ ದುಡಿಯಲು ಅವರಿಗೆ ಸದಾ ಪ್ರೇರಣೆ ನೀಡುತ್ತಿದ್ದ ಒಬ್ಬ ಮಹಾನ್ ನಾಯಕ. ಅವರೇ ಭಾರತದ ಮಿಸ್ಸೈಲ್ ಮ್ಯಾನ್, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ..

15 ಅಕ್ಟೋಬರ್ 1931 ರಂದು ರಾಮೇಶ್ವರದ ಬಡ ಕುಟುಂಬದಲ್ಲಿ ಹುಟ್ಟಿದ ಕಲಾಂ, ದಿನ ಪತ್ರಿಕೆ ಹಂಚುತ್ತಲೇ ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡರು; ದೇಶಕ್ಕೂ ಹೊಸ ಕನಸುಗಳನ್ನು ಕೊಟ್ಟರು. ಅದನ್ನು ನನಸು ಮಾಡುವುದಕ್ಕೆ ದುಡಿದರು. ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಡಾಕ್ಟೊರೆಟ್ ಪದವಿ ಗಳಿಸಿದರು. ಡಿಆರ್‌ಡಿಒ ಮತ್ತು ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದರು. ಇಡೀ ವಿಶ್ವವೇ ಭಾರತದತ್ತ ಬೆರಗುಕಣ್ಣುಗಳಿಂದ ನೋಡುವಂತಹ ಸಾಧನೆಗಳನ್ನು ಮಾಡಿದರು. ಭಾರತದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತರತ್ನ' ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು. ಇದಲ್ಲದೆ ಪದ್ಮ ಭೂಷಣ ಕೂಡ ಅವರಿಗೆ ಒಲಿದು ಬಂದಿತ್ತು, ಇದಲ್ಲದೆ ಹಲವಾರು ವಿಶ್ವವಿದ್ಯಾಲಯಗಳು ಸುಮಾರು 40 ಕ್ಕೂ ಹೆಚ್ಚು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿವೆ. ಬ್ರಹ್ಮಚಾರಿಯಾಗಿದ್ದ ಅವರು, ತಮ್ಮ ಇಡೀ ಜೀವನವನ್ನು ಅಧ್ಯಯನ, ಸಂಶೋಧನೆ, ಬಾಹ್ಯಾಕಾಶ ಕಾರ್ಯಕ್ರಮಗಳ ಯೋಜನೆಗಳಿಗೆ ಮೀಸಲಿಟ್ಟರು.

1998 ರಲ್ಲಿ ಅಮೆರಿಕಾ ಸಹಿತ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ ಭಾರತದ ಫೋಖ್ರಾನ್-2 ಅಣ್ವಸ್ತ್ರ ಪರೀಕ್ಷೆಯ ವಿಚಾರದಲ್ಲಂತೂ ಡಾ.ಅಬ್ದುಲ್ ಕಲಾಂ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಪ್ರಥಮ ಅಣು ಪರೀಕ್ಷೆ 1974ರಲ್ಲಿ ನಡೆಡಿತ್ತು. ಅ ನಂತರ ತೀವ್ರವಾದ ಅಂತಾರಾಷ್ಟ್ರೀಯ ವಿರೋಧ, ಅದರಲ್ಲೂ ಮುಖ್ಯವಾಗಿ ಅಮೆರಿಕದ ನಿರಂತರ ಒತ್ತಡಗಳ ನಡುವೆಯೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಣು ಪರೀಕ್ಷೆ ನಡೆಸಲು ಕೈಗೊಂಡ ನಿರ್ಧಾರಕ್ಕೆ ಇಡೀ ವಿಶ್ವವೇ ದಂಗಾಗಿ ಹೋಯಿತು, ಮಾತ್ರವಲ್ಲ, ಭಾರತ ಒಂದು ಅಣ್ವಸ್ತ್ರ ಹೊಂದಿದ ದೇಶ ಎಂಬುದನ್ನೂ ಇತರ ದೇಶಗಳು ಒಲ್ಲದ ಮನಸ್ಸಿನಿಂದ ಒಪ್ಪುವಂತಾಯಿತು, ಹಾಗೂ ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲೊಂದಾಗಿ ಮಾರ್ಪಾಡು ಹೊಂದಿತು, ವಿಶ್ವ ಮನ್ನಣೆ ಗಳಿಸಲಾರಂಭಿಸಿತು.

2002ರಲ್ಲಿ ಡಾ.ಅಬ್ದುಲ್ ಕಲಾಂ ಅವರು ಅಂದಿನ ಸರಕಾರ ನಡೆಸುತ್ತಿದ್ದ ಬಿಜೆಪಿ ಹಾಗೂ ವಿಪಕ್ಷಗಳ ಬೆಂಬಲದೊಂದಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಐದು ವರ್ಷಗಳ ಸೇವೆ ಸಲ್ಲಿಸಿ ಅವರು ನಾಗರಿಕ ಜೀವನಕ್ಕೆ ಮರಳಿ ವಿದ್ಯಾಭ್ಯಾಸ, ಬರವಣಿಗೆ ಮತ್ತು ಜನಸೇವೆಯಲ್ಲಿ ತೊಡಗಿಕೊಂಡರು.

ಡಾ.ಅಬ್ದುಲ್ ಕಲಾಂರವರು,ಜುಲೈ 27, 2015 ರಂದು ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಕೊನೆಯ ಉಸಿರು ಇರುವವರೆಗೂ ಅವರು ಸೇವೆಯಲ್ಲಿ ನಿರತರಾಗಿದ್ದು, ಇಡೀ ದೇಶದ ಜನತೆಗೆ ಮಾದರಿಯ ವ್ಯಕ್ತಿತ್ವ.

ಅಬ್ದುಲ್ ಕಲಾಂ ಅವರ ಜನ್ಮ ದಿನದ ಶುಭಾಶಯಗಳೊಂದಿಗೆ ಅವರ...
ಅವರ‌ಹಿತ ನುಡಿಗಳು

ಅಬ್ದುಲ್ ಕಲಾಂ ದೇಹ ನಮ್ಮಿಂದ ದೂರವಾಗಿದ್ದರೂ ಅವರ ಸಾಧನೆ, ವ್ಯಕ್ತಿತ್ವಗಳು ನಮಗೆ ಸದಾ ಮಾರ್ಗದರ್ಶನ ಮಾಡುತ್ತಲೇ ಇರುತ್ತವೆ. ಅವರು ಬದುಕಿನ ಕೊನೆಯ ಘಳಿಗೆಯವರೆಗೂ ಮಾರ್ದರ್ಶಕರಾಗೇ ಬದುಕಿ ಸೈ ಎನಿಸಿದರು.
ಅವರ ಅನುಭವದಲ್ಲಿ ಬಂದ ವಿವೇಕಯುಕ್ತ ಮಾತುಗಳು ನಮ್ಮ ಜೀವನಕ್ಕೆ ಅತ್ಯುತ್ತಮ ಮಾರ್ಗದರ್ಶನ ನೀಡಬಲ್ಲವು.

1) ನಿನ್ನ ಕನಸು ನನಸಾಗಬೇಕಿದ್ದರೆ.. ಮೊದಲು ನೀನು ಕನಸು ಕಾಣು..

2) ನಿದ್ದೆಯಲ್ಲಿ ಕಾಣುವುದಲ್ಲ .. ನಿದ್ದೆಗೆಡಿಸಿ ಕಾಡುವುದು

3) ಯಶಸ್ಸನ್ನು ಅನುಭವಿಸಬೇಕಿದ್ದರೇ ಕಷ್ಟಗಳು ತುಂಬಾ ಮುಖ್ಯ

4) ನಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವುದೇ ಯಶಸ್ಸು..

5) ಸೋಲಿನ ಕತೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ ..

6) ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು..

7) ನಮ್ಮ ಮಕ್ಕಳ ಉತ್ತಮ ನಾಳೆಗಾಗಿ ನಮ್ಮ ಇಂದನ್ನು ತ್ಯಾಗ ಮಾಡೋಣ..

8) ಯಾವುದೇ ಸಮಸ್ಯೆಗೂ ಯುದ್ಧ ಅಂತಿಮ ಪರಿಹಾರವಲ್ಲ..

9) ಅತೀ ಸಂತೋಷ ಅಥವಾ ಅತೀ ದುಃಖವಾದಾಗ ಮಾತ್ರ ಕವನ ಸೃಷ್ಟಿ

10) ಯುವಕರು ಕೆಲಸ ಹುಡುಕಬಾರದು.. ಕೆಲಸ ಉತ್ಪಾದಕರಾಗಬೇಕು

11) ವಿಜ್ಞಾನ ಮಾನವೀಯತೆಗೆ ಸುಂದರ ಉಡುಗೊರೆ. ನಾವು ಅದನ್ನು ವಿರೂಪಗೊಳಿಸಬಾರದು

12) ಮಳೆ ಬಂದಾಗ ಎಲ್ಲ ಹಕ್ಕಿಗಳು ಮರದ ಆಶ್ರಯ ಪಡೆಯುತ್ತವೆ. ಆದರೆ ಹದ್ದುಗಳು ಮೋಡದಿಂದಲೂ ಮೇಲಕ್ಕೆ ಹೋಗಿ ಹಾರಾಡುತ್ತವೆ. ಸಮಸ್ಯೆ ಎಲ್ಲರಿಗೂ ಇದೆ. ಆದರೆ ಅದನ್ನು ಹೇಗೆ ಎದುರಿಸ್ತೀರಿ ಎನ್ನುವುದು ಮುಖ್ಯ

13) ಯಾವುದರಲ್ಲೂ ತೊಡಗಿಸಿಕೊಳ್ಳದೇ ಇದ್ದರೆ ನೀವು ಯಶಸ್ವಿಯಾಗಲ್ಲ. ತೊಡಗಿಸಿಕೊಂಡರೆ ಯಾವುದೇ ಕಾರಣಕ್ಕೂ ಸೋಲಲ್ಲ

14) ನಮಗೆಲ್ಲರಿಗೂ ಒಂದೇ ಪ್ರತಿಭೆ ಹೊಂದಿಲ್ಲ. ಆದರೆ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಸಮಾನ ಅವಕಾಶವಿರುತ್ತೆ

15) ಸೂರ್ಯನಂತೆ ಪ್ರಜ್ವಲಿಸಬೇಕಿದ್ದರೆ, ಸೂರ್ಯನಂತೆ ಮೊದಲು ಉರಿಯಬೇಕು

16) ನಿಮ್ಮ ಮೊದಲ ಜಯದ ನಂತರ ವಿಶ್ರಾಂತಿ ಪಡೆಯಬೇಡಿ. ಯಾಕಂದ್ರೆ ನೀವು ಎರಡನೇ ಬಾರಿ ಸೋತರೆ, ಮೊದಲನೇ ಜಯ ಬರೀ ಅದೃಷ್ಟ ಎಂದು ತೆಗಳುವವರು ಹೆಚ್ಚು ಇರುತ್ತಾರೆ

17) ಕೆಲವರನ್ನು ಸೋಲಿಸುವುದು ಭಾರೀ ಸುಲಭ. ಆದ್ರೆ ಕೆಲವರನ್ನು ಗೆಲ್ಲುವುದು ಭಾರೀ ಕಷ್ಟ

18) ನೀವು ಮಾಡುವ ಕೆಲಸವನ್ನು ಪ್ರೀತಿಸಿ, ಶ್ರದ್ಧೆಯಿಂದ ಕೆಲಸ ಮಾಡಿ ಆತ್ಮಶುದ್ಧಿ ಮಾಡಿಕೊಳ್ಳಿ..

19) ನಿಮ್ಮ ಭವಿಷ್ಯ ಬದಲಾಗಬೇಕಾದ್ರೆ, ಮೊದಲು ನಿಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳಿ..

20) ಸ್ಪಷ್ಟ ಗುರಿ.. ವಿಷಯ ಜ್ಞಾನ.. ನಿರಂತರ ಶ್ರಮ.. ಅಧ್ಯಯನ ಶೀಲತೆ

21) ಜೀವನ ಮತ್ತು ಸಮಯ ನಮ್ಮ ಉತ್ತಮ ಶಿಕ್ಷಕರು

22) ಜೀವನ ನಮ್ಮ ಗುರಿಯನ್ನು ನಿರ್ದೇಶಿಸುತ್ತದೆ. ಸಮಯ ಜೀವನದ ಮೌಲ್ಯವನ್ನು ನಿರ್ಧರಿಸುತ್ತದೆ

23) ನಾವು ಸ್ವತಂತ್ರರಾಗದಿದ್ದರೆ, ಯಾರೂ ಗೌರವಿಸುವುದಿಲ್ಲ

24) ನಿನ್ನ ತಪ್ಪುಗಳೇ ನಿನ್ನ ನಿಜವಾದ ಗುರು
                   
#ಜನ್ಮದಿನದ_ಶುಭಾಶಯಗಳು_ಕಲಾಂ_ಜಿ
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com