For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಭಯಾನಕ ಮುಖವಾಡದ ಹಿಂದೆ ನೆಚ್ಚಿನ ಗೆಳೆಯ!

ಭಯಾನಕ ಮುಖವಾಡದ ಹಿಂದೆ ನೆಚ್ಚಿನ ಗೆಳೆಯ!*

ಭಯಾನಕ ಮುಖವಾಡವನ್ನು ಕಂಡು ಗಾಬರಿಯಾದ, ಆದರೆ ಆನಂತರ ಅಸಾಮಾನ್ಯ ಎನಿಸಬಹುದಾದ ಪಾಠವೊಂದನ್ನು ಕಲಿತ ಒಂದು ನಿಜಜೀವನದ ಘಟನೆಯೊಂದು ಇಲ್ಲಿದೆ. ನಮ್ಮ ಸ್ವಾಮಿ ಪೂಜ್ಯ ದಾದಾ ಜೆ.ಪಿ. ವಾಸ್ವಾನಿ ಯವರು ಹೇಳಿದ ಘಟನೆ. 1925ರಲ್ಲಿ ನಾನಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದೆ. ನನ್ನ ಇಂಗ್ಲಿಷ್ ಉಪಾಧ್ಯಾಯರು ಕತೆ ಪುಸ್ತಕಗಳನ್ನು ಓದುವುದರಿಂದ ಭಾಷೆಯನ್ನು ಬೇಗ ಕಲಿಯಬಹುದು ಎಂದು ನಮಗೆ ತಿಳಿಸಿದರು. ನಾನು ಅಂತಹ ಪುಸ್ತಕವೊಂದನ್ನು ಹುಡುಕತೊಡಗಿದೆ.

ನನಗೆ ಗೋವಿಂದ ಎಂಬ ಹೆಸರಿನ ಗೆಳೆಯನಿದ್ದ. ನಾನು ಆತನನ್ನು ಯಾವುದಾದರೂ ಇಂಗ್ಲಿಷ್ ಭಾಷೆಯ ಸಣ್ಣ ಕತೆಗಳ ಪುಸ್ತಕಗಳಿದ್ದರೆ ನನಗೆ ಕೊಡಬೇಕೆಂದು ಕೇಳಿಕೊಂಡೆ. ಆತ ಆಯಿತು. ನಮ್ಮ ಮನೆಯಲ್ಲಿ ಒಂದು ಪುಸ್ತಕ ಇರಬಹುದು. ಅದನ್ನು ಹುಡುಕಿ, ಹೋಳಿ ಹಬ್ಬದ ರಜಾ ದಿನದಂದು ತಂದು ಕೊಡುತ್ತೇನೆ ಎಂದು ವಾಗ್ದಾನ ಮಾಡಿದ. ನಾನು ಹೋಳಿ ಹಬ್ಬದ ದಿನವನ್ನೇ ಸಡಗರ-ಸಂಭ್ರಮಗಳಿಂದ ನಿರೀಕ್ಷಿಸುತ್ತಿದ್ದೆ. ಅಂದು ನಮ್ಮ ಮನೆಯ ಮುಂಬಾಗಿಲನ್ನು ತಟ್ಟಿದ ಶಬ್ದವಾಯಿತು. ನನ್ನ ಸ್ನೇಹಿತನೇ ಬಂದಿರಬೇಕೆಂಬ ಕಾತುರತೆಯಿಂದ ನಾನು ಬಾಗಿಲು ತೆರೆದೆ. ಆದರೆ ಹೊರಗೆ ಕಂಡ ದೃಶ್ಯವನ್ನು ಕಂಡು ನಾನು ಕಿಟಾರನೆ ಕಿರುಚಿಕೊಂಡೆ. ಏಕೆಂದರೆ ಭಯಂಕರವಾದ ಸಿಂಹದ ಮುಖವಾಡ ಧರಿಸಿದ್ದವರೊಬ್ಬರು ನನಗೆ ಕಂಡರು.

ನಾನು ಭಯದಿಂದ ಕಿರುಚಿಕೊಳ್ಳುತ್ತಲೇ ಮನೆಯೊಳಕ್ಕೆ ಓಡಿಹೋದೆ. ಆಗ ಆ ಭಯಂಕರ ಮುಖವಾಡದ ಒಳಗಿನಿಂದ ನನಗೆ ಪರಿಚಯವಿರುವ ಮಧುರವಾದ ಧ್ವನಿ ಕೇಳಿಬಂತು. ಹೆದರಬೇಡ! ನಾನು ನಿನ್ನ ನೆಚ್ಚಿನ ಗೆಳೆಯ ಗೋವಿಂದ!  ತಮಾಷೆಗಾಗಿ ಸಿಂಹದ ಮುಖವಾಡವನ್ನು ಧರಿಸಿ ಬಂದಿದ್ದೇನೆ. ಇಲ್ಲಿ ಬಾ. ನೀನು ಬಯಸುತ್ತಿದ್ದ ಸಣ್ಣ ಕತೆಗಳ ಪುಸ್ತಕವನ್ನೂ ನಾನು ತಂದಿದ್ದೇನೆ ಎನ್ನುವ ಮಾತುಗಳು ಕೇಳಿಸಿದವು. ಆ ಧ್ವನಿಯನ್ನು ಕೇಳುತ್ತಲೇ ನನ್ನ ಹೆದರಿಕೆಯೆಲ್ಲ ಕರಗಿಹೋಯಿತು. ನನ್ನ ಪುಕ್ಕಲತನಕ್ಕೆ ನಾನೇ ನಕ್ಕುಬಿಟ್ಟೆ. ಓಡೋಡಿ ಹೋಗಿ ನನ್ನ ಗೆಳೆಯನನ್ನು ತಬ್ಬಿಕೊಂಡೆ.

ಮನೆಯೊಳಕ್ಕೆ ಬರಮಾಡಿಕೊಂಡೆ. ನಡೆದು ಬರುವಾಗ ಅವನು ಧರಿಸಿದ ಮುಖವಾಡವನ್ನು ಮುಟ್ಟಿ ನೋಡಿದೆ. ರಟ್ಟಿನ ಕಾಗದದ ಮೇಲೆ ಬಣ್ಣಬಣ್ಣದ ಚಿತ್ತಾರ ಬಿಡಿಸಿದ್ದ ಮುಖವಾಡ ಅದು! ನಾನು ಮುಟ್ಟುತ್ತಿದ್ದಂತೆ ಆ ಮುಖವಾಡ ಕೆಳಕ್ಕೆ ಬಿದ್ದು ಹೋಯಿತು. ನನ್ನ ನೆಚ್ಚಿನ ಗೆಳೆಯನ ಆಕರ್ಷಕ ಮುಖ ನನಗೆ ಕಾಣಿಸಿಕೊಂಡಿತು. ಆತನೂ ಗಟ್ಟಿಯಾಗಿ ನಗುತ್ತಿದ್ದ!  ಅಂದು ನಾನು ಕಲಿತ ಪಾಠದಿಂದಾಗಿ ನಾನು ಇಂದಿಗೂ ಬದುಕಿನಲ್ಲಿ ಯಾವುದೇ ಬಗೆಯ ಅಪಾಯ ಎದುರಾದರೂ ತೊಂದರೆ-ತಾಪತ್ರಯಗಳು ಬಂದೆರಗಿದರೂ ಅವನ್ನು ನೋಡಿ ಗಾಬರಿಯಾಗುವುದಿಲ್ಲ. ಅವು ಭಯಂಕರ ಮುಖವಾಡವನ್ನು ಧರಿಸಿರಬಹುದು. ಆದರೆ ಅವುಗಳ ಹಿಂದೆ ನಮಗೆ ಒಳ್ಳೆಯದನ್ನುಂಟು ಮಾಡುವ ಏನೋ ಒಂದು ಕೊಡುಗೆ ಅಡಗಿದೆ ಎಂದು ಭಾವಿಸುತ್ತೇನೆ. ಅನುಭವದಿಂದ ನಾನು ಕಂಡು ಕೊಂಡಿರುವ ಸತ್ಯವೇನೆಂದರೆ ನಮಗೆ ಆ ಸಮಸ್ಯೆಗಳು ಎದುರಾದ ತಕ್ಷಣ ಏನೋ ಬರಬಾರದ್ದು ಬಂದಿತೆಂದೂ, ಆಗಬಾರದ್ದು ಆಯಿತೆಂದೂ ಅಂದುಕೊಳ್ಳುತ್ತೇವೆ.

ಆದರೆ ಆ ಸಮಸ್ಯೆಗಳು ನಾವು ಅಂದುಕೊಂಡಷ್ಟು ತೀವ್ರವಾದ ತೊಂದರೆ ಯನ್ನುಂಟು ಮಾಡದೆ ಹೋಗಬಹುದು. ಅಥವಾ ಅವುಗಳು ನಮಗೆ ಒಂದು ಅಮೂಲ್ಯವಾದ ಪಾಠವನ್ನು ಕಲಿಸಬಹುದು. ದಾದಾ ವಾಸ್ವಾನಿಯವರಿಗೆ ಪ್ರಣಾಮಗಳು. ನಮಗೂ ಬದುಕಿನಲ್ಲಿ ಏನಾದರೂ ಸಮಸ್ಯೆ, ತೊಂದರೆ- ತಾಪತ್ರಯಗಳು ಎದುರಾದಾಗ ಮೇಲಿನ ಘಟನೆಯನ್ನು ಜ್ಞಾಪಿಸಿಕೊಳ್ಳಬಹುದು. ಅವನ್ನು ಧೈರ್ಯವಾಗಿ ಎದುರಿಸಬಹುದು.  ಮನಸ್ಸಿನಲ್ಲಿ ‘ಬಂದದ್ದೆಲ್ಲಾ ಬರಲೀ ಗೋವಿಂದನ ದಯೆ ಯೊಂದಿರಲಿ’ಎಂದು ಪ್ರಾರ್ಥಿಸಬಹುದು. ಅವು ಬಂದು ಹೋದ ಎಷ್ಟೋ ದಿನಗಳ, ವರ್ಷಗಳ ನಂತರ ಅವುಗಳನ್ನು ನೆನಪಿಸಿಕೊಂಡಾಗ ನಮ್ಮ ಮುಖದ ಮೇಲೆ ಒಂದು ಮುಗುಳ್ನಗೆ ಮಿಂಚಿದರೂ ಆಶ್ಚರ್ಯವಿಲ್ಲ, ಅಲ್ಲವೇ? ಭಯಾನಕ ಮುಖವಾಡದ ಹಿಂದೆ ನಮ್ಮ ನೆಚ್ಚಿನ ಗೆಳೆಯನಿರಬಹುದು! ಆತ ನಮಗೆ ಆನಂದವನ್ನು ತರಬಹುದು ಅಥವಾ ಪಾಠವೊಂದನ್ನು ಕಲಿಸಬಹುದು!

*ಕೃಪೆ :ಷಡಕ್ಷರಿ.*                                               ಸಂಗ್ರಹ: ವೀರೇಶ್ ಅರಸಿಕೆರೆ.
Share:

ಗುರಿ ಮೌಂಟ್ ಎವರೆಸ್ಟ್ ಆಗಿರಲಿ.

ಗುರಿ ಮೌಂಟ್ ಎವರೆಸ್ಟ್ ಆಗಿರಲಿ.
ಗುರಿ ಎಲ್ಲರಿಗೂ ಇರಲೇಬೇಕಾದದ್ದು ಅತೀ ಅಗತ್ಯ. ಗುರಿ ಇಲ್ಲದ ಜೀವನ ಎಂದೂ ದಡ ಸೇರದು. ಇಂದು ನಾವು ಅಂಗನವಾಡಿಯಲ್ಲಿ ಓದುವ ಮಗುವನ್ನು ನೀನು ಮುಂದೆನಾಗಬೇಕೆಂದಿರುವೆ ಪುಟ್ಟಾ ಅಂತಾ ಕೇಳಿದರೆ ಆ ಮಗು ಕೂಡಾ ಹೇಳುತ್ತೆ, ಡಾಕ್ಟರ್, ಎಂಜಿನಿಯರ್, ಟೀಚರ್, ಡಿ ಸಿ, ಎಸಿ ಮತ್ತೊಂದು ಮಗದೊಂದು. ಹಾಗೆಂದರೇನು ಎಂದು ಖಂಡಿತ ಆ ಮಗುವಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅಂಥದೊಂದು ಗುರಿಯನ್ನು ತಂದೆಯೋ, ತಾಯಿಯೊ ಮತ್ತಾರೋ ಆ ಮಗುವಿನ ಮನಸ್ಸಿನಲ್ಲಿ ಬಿತ್ತಿರುತ್ತಾರೆ ಖಂಡಿತಾ. ಹಾಗಂತ ಎಲ್ಲರೂ ತಾವಂದುಕೊಂಡಂತೆ ಆಗರು( ಹಾಗೊಂದು ವೇಳೆ ಅಂದುಕೊಂಡಂತೆಲ್ಲ ಆಗಿದ್ದರೆ ನಮ್ಮ ಜೀವನಕ್ಕೆ ಥ್ರಿಲ್ ಅನ್ನೋದು ಎಲ್ಲಿರ್ತಿತ್ತು ಅಲ್ವಾ) ಆದರೆ ಖಂಡಿತಾ ಆ ಮಗುವಿನಲ್ಲಿ ಭಾವಿ ಜೀವನದ ಬಗ್ಗೆ ಖಂಡಿತಾ ಒಂದು ಕನಸಿದೆ ಅಂತಾನೇ ಅರ್ಥಾ . ಎಲ್ಲೋ ಓದಿದ ನೆನಪು, ತೇನಸಿಂಗ್ ಶೇರ್ಪಾ ಮೌಂಟ್ ಎವರೆಸ್ಟನ್ನು ಹತ್ತಿ ಮುಗಿಸಿದ ನಂತರ ಅವನನ್ನು ಯಾರೋ ಕೇಳಿದರಂತೆ " ನೀನು ಮೌಂಟ್ ಎವರೆಸ್ಟ್ ಹತ್ತಿ ಬಂದೆಯಲ್ಲಾ ಈಗಾ ನಿನಗೆ ಎನನಿಸುತ್ತಿದೆ" ಎಂದು, ಅದಕ್ಕೆ ತೇನಸಿಂಗ್ ಹೇಳಿದರಂತೆ ನಾನು ಮೌಂಟ್ ಎವರೆಸ್ಟನ್ನು ಈಗಲ್ಲ ಹತ್ತಿದ್ದು ನಾನಿ ಚಿಕ್ಕವನಿರುವಾಗಲೇ ಹತ್ತಿಯಾಗಿದೆ ಎಂದು, ಆ ವ್ಯಕ್ತಿ ಗಾಬರಿಯಿಂದ ಅದ್ಹೇಗೆ ಸಾಧ್ಯ ಎಂದಾಗ ತೇನಸಿಂಗ್ ಹೇಳುತ್ತಾರೆ, " ನಾನು ಚಿಕ್ಕವನಿದ್ದಾಗ ಕುರಿಗಳನ್ನು ಈ ಪರ್ವತದ ಕೆಳಗೆ ಮೇಯಿಸುತ್ತಿದ್ದೆ , ಆಗ ನನಗೆ ಬುತ್ತಿ ತರುತ್ತಿದ್ದ ನನ್ನ ತಾಯಿ ಕೇಳಿದರು ತೇನಸಿಂಗ್ ಆ ಪರ್ವತವನ್ನು ನೀನು ಹತ್ತಿ ನನ್ನ ಆಸೆ ಈಡೇರಿಸುವೆಯಾ ಎಂದು, ಅದೇ ದಿನ ನಾನು ಮಾನಸಿಕವಾಗಿ ಈ ಪರ್ವತವನ್ನು ಹತ್ತಿಯಾಗಿದೆ" ಎಂದು. ನಿಜಾ ಮನುಷ್ಯನಿಗೆ ಕನಸು ಇರಬೇಕು, ಒಂದು ಗುರಿ ಖಂಡಿತ ಇರಬೇಕು ಹಾಗೆಯೇ ಆ ಗುರಿಯನ್ನು ತಲುಪುವ ಛಲ, ಶ್ರದ್ಧೆ , ನಿಷ್ಠೆ ಮತ್ತು ಪ್ರಾಮಾಣಿಕ ಪ್ರಯತ್ನಗಳೂ ಇರಬೇಕು. ಇಂದು‌ ಪ್ರಯತ್ನಗಳು ಕಡಿಮೆಯಾಗುತ್ತಿದ್ದು ಬಹುತೇಕ ಜನರು ಯಶಸ್ಸಿಗಾಗಿ‌ ಶಾರ್ಟ್ ಕಟ್ ಮಾರ್ಗಗಳ ಹುಡುಕಾಟದಲ್ಲಿ ಕಳೆದು ಹೋಗಿದ್ದೀವಿ ಏನೋ ಅನಿಸುತಿದೆ, ನೋಡಿ ಹೆಚ್ಚು ಶ್ರಮ ಬೇಡ ಆದರೆ ಕೈತುಂಬ ಸಂಬಳ ಬೇಕೆಂಬ ಉದ್ಯೋಗಿಗಳು ಒಂದೆಡೆಯಾದರೆ, ಓದಲೊಲ್ಲರು, ಸರಿಯಾಗಿ ಶಾಲೆಗೆ ಬರಲೊಲ್ಲರು ಆದರೂ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ೮೦%-೯೦% ಅಂಕಗಳು ಬೇಕು, ಇದು ಹೇಗೆ ಸಾಧ್ಯ? ಶ್ರಮವೇ ನಮ್ಮ ಯಶಸ್ಸಿನ ಮಾರ್ಗವಲ್ಲವೇ?

ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ

ಸಹ ಶಿಕ್ಷಕರು,

ಸರಕಾರಿ ಪ್ರೌಢಶಾಲೆ ನಾಗರಾಳ. ತಾ|| ಬೀಳಗಿ
Share:

ಹಸಿವಾದಗ ಮಾತ್ರ....?



ಚಕ್ರವರ್ತಿಯೊಬ್ಬನಿಗೆ ಇಡೀ ಭೂಮಂಡಲವನೆಲ್ಲ ಗೆದ್ದು ತನ್ನ ಚಕ್ರಾಧಿಪತ್ಯ ಸ್ಥಾಪಿಸಬೇಕೆಂಬ ಬಯಕೆ.
ಅದರಂತೆ ತನ್ನ ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋದ.. ಘನ ಘೋರ ಯುದ್ದ ನಡೆಯಿತು ಲಕ್ಷಾಂತರ ಸೈನಿಕರು ಮಡಿದರು.... ಚಕ್ರವರ್ತಿ ತಾನು ಹಮ್ಮಿನಲ್ಲಿ ಯುಧ್ಧ ಭೂಮಿಯಲ್ಲಿ ಹೊಡೆದುರುಳಿಸಿದ ಸೈನಿಕರ ಶವಗಳತ್ತ ನೋಡುತಿದ್ದ,,, ಅವನಿಗೆ ದಿಗ್ಭ್ಮಮೆಯಾಗುವ ದೃಶ್ಯವೊಂದು ಕಂಡು ಬಂದಿತು. ಆ ನಾಡಿನ ಆದಿವಾಸಿಯೊಬ್ಬ ಹೆಣವೊಂದನ್ನ ಕಿತ್ತು ಗಬಗಬ ತಿನ್ನುತ್ತಿದ್ದ..... ಚಕ್ರವರ್ತಿಯನ್ನು ಕಂಡು ಭಯಗೊಂಡ ಆದಿವಾಸಿಯು "ದೊರೆಯೇ ಹಸಿವನ್ನು ತಾಳಲಾರದೆ ನೀನು ಹೊಡೆದುರುಳಿಸಿದ ಸೈನಿಕನ ಹೆಣವನ್ನು ತಿನ್ನುತಿದ್ದೇನೆ. ಇದು ನಿನ್ನ ಆಹಾರ ನಿನ್ನ ಅಪ್ಪಣೆ ಇಲ್ಲದೆ ತಿನ್ನುತಿದ್ದೇನೆ ಕ್ಷಮಿಸು" ಎಂದ.. ಅದಕ್ಕೆ ಚಕ್ರವರ್ತಿಯು "ನಾನು ನರಮಾಂಸ ಭಕ್ಷಕನಲ್ಲ" ಎಂದ. ಆಗ ಆದಿವಾಸಿ ಹೇಳುತ್ತಾನೆ "ನೀನು ನರಮಾಂಸ ಭಕ್ಷಕನಲ್ಲ ಎಂದ ಮೇಲೆ ಇಷ್ಟೆಲ್ಲ ಮನುಷ್ಯರನ್ನು ಏಕೆ ಕೊಂದೆ? ನಾನು ಹಸಿವಾದಾಗ ಮಾತ್ರ ಅನಿವಾರ್ಯವಾದರೆ ಕೊಲ್ಲುತ್ತೇನೆ".

(ದೇವನೂರು ರವರ ಇಂತಹ ಕಥೆಗಳು ನಿಜಕ್ಕೂ ಮನುಷ್ಯನನ್ನು ಚಿಂತನಾಲೋಕಕ್ಕೆ ಕೊಂಡೊಯ್ಯದಿರಲಾರವು....)
Shared in Facebook
Share:

ಶ್ರದ್ಧೆ ಮತ್ತು ಅದಮ್ಯ ಉತ್ಸಾಹ


      💐ಶ್ರದ್ಧೆ💐
  ಚಿಕ್ಕವರಾದರೇನು ದೊಡ್ಡವರಾದರೇನು ಶ್ರದ್ಧೆ ಉಳ್ಳವರು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು, ಶ್ರದ್ಧೆಯಿಲ್ಲದವರು ಎಂಥವರಿದ್ದರೂ ಏನನ್ನೂ ಸಾಧಿಸಲಾರರು. ಸಿದ್ಧಿಯ ಶ್ರೀ ಗಿರಿಯತ್ತ ನಮ್ಮನ್ನು ಕೈಹಿಡಿದು ಮುನ್ನಡೆಸುವುದೇ ಈ ಶ್ರದ್ಧೆ.
 ಒಂದು ಭದ್ರವಾದ ಕೋಟೆಯ ಗೋಡೆ ಇತ್ತು ಅದರಲ್ಲಿ ಆಲದ ಮರದ ಒಂದು ಚಿಕ್ಕಬೀಜ ಬಂದು ಬಿದ್ದಿತು. ಕೋಟೆ ಗೋಡೆಯು ದರ್ಪದಿಂದ ಕೇಳಿತು- "ಇಲ್ಲಿ ಮಣ್ಣಿಲ್ಲ, ನೀರಿಲ್ಲ ನೀನು ಹೇಗೆ ಬೆಳೆಯುತ್ತಿ?" "ನೂಡುತ್ತಿರು ನಾನು ಹೇಗೆ ಬೆಳೆಯುತ್ತೇನೆ!" ಎಂದಿತು ಬೀಜ.ಅಷ್ಟರಲ್ಲಿ ಮಳೆ ಬಿದ್ದಿತು. ಅಷ್ಟು ಹಸಿ ಸಾಕಾಗಿತ್ತು. ಅದು ಬೇರು ಬಿಟ್ಟಿತು. ಬಿಗಿ ಹಿಡಿಯಿತು. ನಿಧಾನವಾಗಿ ಗಾಳಿ ಧೂಳ ಬಳಸಿಕೊಂಡು ಮೊಳಕೆಯೊಡೆಯಿತು. ದಿನಗಳು ಉರುಳಿದವು. ಋತುಗಳು ಸರಿದವು. ಬೇರು ಬಲಿಷ್ಠವಾಯಿತು! ಕೋಟೆಗೋಡೆ ಸಡಿಲಾಯಿತು!! ಚಿಕ್ಕ ಬೀಜದ ಶ್ರದ್ಧೆಗೆ ಭದ್ರವಾದ ಕೋಟೆಗೋಡೆಯು ನಡುಗಿ ಹೋಗಿತ್ತು.!

 💐ಅದಮ್ಯ ಉತ್ಸಾಹ💐
    ತೇನಸಿಂಗನು ಉತ್ಸಾಹಿ ಬಾಲಕ, ದನಗಾಯಿ ಹಿಮದ-ಬೆಟ್ಟಗಳ ಮಧ್ಯಮ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಿದ್ದನು. ದಿನ ಬೆಳಗಾದರೆ ಜಗತ್ತಿನ ಅತ್ಯುನ್ನತ ಪರ್ವತ ಎವರೆಸ್ಟ್ ಶಿಖರದ ದರ್ಶನ ಆಗುತ್ತಿತ್ತು! ಒಂದು ದಿನ ಅವನು ತಾಯಿಗೆ ಕೇಳಿದ- "ಈ ಶಿಖರವನ್ನು ಯಾರಾದರೂ ಹತ್ತಿರುವರೇನಮ್ಮ?" ತಾಯಿ ಹೇಳಿದಳು- "ಇಲ್ಲ ಮಗು, ಇದೂವರೆಗೆ ಜಗತ್ತಿನಲ್ಲಿ ಯಾರೂ ಅದನ್ನು ಹತ್ತಿಲ್ಲ;  ಹತ್ತುವ ಪ್ರಯತ್ನವನ್ನೂ ಮಾಡಿಲ್ಲ!" ಅದೇ ದಿನ ತೇನಸಿಂಗನು ಶಿಖರವನ್ನು ಹತ್ತುವ ನಿರ್ಣಯ ಮಾಡಿದ. ಅದೆಂಥ ನಿರ್ಣಯವದು!  ಕುಳಿತರೆ ನಿಂತರೆ ಅದರದೆ ಕನಸು! ಅದೆಷ್ಟು ಬಾರಿ ಆತ ಕನಸಿನಲ್ಲಿ ಆ ಶಿಖರವನ್ನು ಏರಿ ಇಳಿದನೋ; ಇಳಿದು ಏರಿದನೋ? ಸದಾ ಮನಸಿನಲ್ಲಿ ಅದರದೇ ಚಿಂತನೆ. ಅದೇನು ಸಾಮಾನ್ಯ ಶಿಖರವಲ್ಲ.  ಆ ಶಿಖರವನ್ನು ಏರುವಾಗ ಯಾವುದೇ ಕ್ಷಣವೂ ಜೀವನದ ಕೊನೆಯ ಕ್ಷಣವಾಗಬಹುದು. ಆದರೆ ಆತ ಅಷ್ಟೇ ಛಲದಿಂದ, ಉತ್ಸಾಹದಿಂದ, ಪ್ರೇಮದಿಂದ ನಿರಂತರ ಪ್ರಯತ್ನಿಸಿದ. ಅದ್ಭುತ ಸಾಧನೆಯದು. ಶಿಖರವನ್ನೇರುವ ಕನಸು ಆತನ ಮೈ-ಮನವನುಂಡು ಪ್ರಾಣಕ್ಕೆ ಪ್ರಾಣವಾಯಿತು. ಒಂದು ದಿನ ಆತನ ಕನಸು ನನಸಾಯಿತು! ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಪ್ರಥಮ ವ್ಯಕ್ತಿಯಾದ! ಆತನದು ಅದಮ್ಯ ಉತ್ಸಾಹ!

ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ.                                    ಸಂಗ್ರಹ: ವೀರೇಶ್ ಅರಸಿಕೆರೆ.
Share:

ರಾಷ್ಟ್ರೀಯ ವಿಜ್ಞಾನ ದಿನ


ರಾಷ್ಟ್ರೀಯ ವಿಜ್ಞಾನ ದಿನ

ಫೆಬ್ರುವರಿ 28 ಭಾರತೀಯ ವಿಜ್ಞಾನಕ್ಕೊಂದು ಪರ್ವ ದಿನ.  1928ರ ಇದೇ ದಿನದಂದು ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿದರು.

ಮೆಡಿಟರೇನಿಯನ್ ಸಮುದ್ರದಲ್ಲಿ ಪಯಣಿಸುತ್ತಿದ್ದ ಸಿ ವಿ ರಾಮನ್ ಅವರು ಕಡಲಿನ ನೀಲಿ ಬಣ್ಣವನ್ನು ಕಂಡು ಆ ಸೊಬಗಿಗೆ ಪರವಶರಾದದ್ದು ಮಾತ್ರವಲ್ಲ, ಅವರಿಗೆ ನೀರಿನ ಬಣ್ಣ ಅದು ಹೇಗೆ ನೀಲಿಯಾಗಿದೆ ಎಂಬ ಸೋಜಿಗ ಕೂಡಾ ಉಂಟಾಯಿತು.  ಆಕಾಶವೂ ನೀಲಿ, ಸಮುದ್ರವೂ ನೀಲಿ.  ಹಾಗಾದರೆ ಆಕಾಶದ ಪ್ರತಿಫಲನ ನೀರಿನ ಮೇಲೆ ಕಾಣುತ್ತಿದೆಯೇ ಇಲ್ಲ ಇದಕ್ಕೆ ಇನ್ನೇನಾದರೂ  ಕಾರಣ ಇರಬಹುದೇ ಎಂದು ತೀವ್ರವಾಗಿ ಚಿಂತಿಸಿದ ಅವರಿಗೆ “ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ  ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ” ಎಂದು ದೃಢಪಟ್ಟಿತು.   ಆ ಕ್ಷಣದಿಂದಲೇ ತಮ್ಮ ತೀವ್ರವಾದ ಸಂಶೋಧನೆಗಳನ್ನು ನಡೆಸಿದ ರಾಮನ್ ದ್ರವಗಳಲ್ಲಿ ಬೆಳಕಿನ ಸಂಚಲನೆಯ ಕುರಿತಾದ ಸುದೀರ್ಘ ಅಧ್ಯಯನವನ್ನು ಕೈಗೊಂಡು ಆ ಪ್ರಯೋಗಗಳ ಪರಿಣಾಮವನ್ನು ವೈಜ್ಞಾನಿಕ ಲೋಕದೆದುರು ತೆರೆದಿಟ್ಟರು.  ಈ ಸಂಶೋಧನೆಗಾಗಿ ರಾಮನ್ ಅವರಿಗೆ ನೋಬಲ್ ಪಾರಿತೋಷಕ ಸಂದಿತು ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ರಾಮನ್ ಅವರ ಈ ಸಂಶೋಧನೆಯ ಗೌರವಾರ್ಥವಾಗಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 

ಇಂದು ಬಾಹ್ಯಾಕಾಶ, ಪರಮಾಣು ವಿಜ್ಞಾನ, ಮಾಹಿತಿ ವಿಜ್ಞಾನ, ಜೈವಿಕ ತಂತ್ರಜ್ಞಾನ, ವೈದ್ಯಕೀಯ  ಕ್ಷೇತ್ರಗಳಲ್ಲೂ ಸೇರಿದಂತೆ ದೇಶದ ವಿಜ್ಞಾನಿಗಳು ಕೊಟ್ಟಿರುವ ಕೊಡುಗೆ ಮಹತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲವನ್ನೂ ಹಾಲು ಕರೆಯುವ ಹಸು ಎಂದು  ಕಾಣುವಂತಹ ಇಂದಿನ  ವ್ಯಾಪಾರೀ ಮನೋಧರ್ಮದಲ್ಲಿ ಹೊಸ ಪೀಳಿಗೆಯ ತಲೆಮಾರುಗಳು ಸಂಶೋಧನಾ ಕ್ಷೇತ್ರಗಳತ್ತ ಮೊಗ ಮಾಡುತ್ತಿರುವುದು ಕಡಿಮೆಯಾಗುತ್ತಿದೆ ಎಂಬುದು ಸುಳ್ಳಲ್ಲ.  ಹಾಗೆ ಆಸಕ್ತರಿದ್ದರೂ ಅವರು ಅನಿವಾರ್ಯವೆಂಬಂತೆ ಅಮೆರಿಕಕ್ಕೆ ಜಾರುತ್ತಾರೆ. 

ವಿದ್ಯಾರ್ಥಿಗಳನ್ನು ಯಾಂತ್ರಿಕವಾಗಿ ಪ್ರಶ್ನಪತ್ರಿಕೆಗಳ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡಿ ಅವರಲ್ಲಿ ಪ್ರಾಯೋಗಿಕವಾಗಿ ವಿಜ್ಞಾನದ ಚಿಂತನೆಯ ಶಕ್ತಿಯನ್ನು ಕುಂಠಿತಗೊಳಿಸುವ ಗುಡ್ಡಿಪಾಠದ  ಪ್ರವೃತ್ತಿ ದೇಶದಾದ್ಯಂತ ಇಂದು ವ್ಯಾಪಿಸಿಕೊಂಡುಬಿಟ್ಟಿದೆ.  ವೈಜ್ಞಾನಿಕ ಕ್ಷೇತ್ರದ ಕೆಲವೊಂದು ನಿಲುವುಗಳು ಅನಪೇಕ್ಷಿತವಾಗಿ ರಾಜಕೀಯ ಬಣ್ಣ ತಳೆದುಕೊಂಡು, ವಿಜ್ಞಾನದ ವ್ಯವಸ್ಥೆಗಳ ಕುರಿತಾಗಿ  ಅಪ್ರಬುದ್ಧ ರಾಜಕಾರಣಿಗಳ ಅನುಚಿತ ಮಾತುಗಳಿಗೆ ಕೂಡಾ ಪ್ರೇರಿತವಾಗಿರುವುದು, ವಿಜ್ಞಾನ ನಮ್ಮ ದೇಶದಲ್ಲಿ ಪಡೆದುಕೊಳ್ಳುತ್ತಿರುವ ದುರ್ಗತಿಗೆ ವಿಶ್ಲೇಷಣೆಯಾಗುತ್ತಿದೆಯೇನೋ ಎಂಬ ನಿರಾಶೆ ಕೂಡಾ ಹಬ್ಬುತ್ತಿದೆ. 

ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳು ಬರುತ್ತಿರುವ ಹಾಗೆಲ್ಲಾ ಮನುಷ್ಯ ಅವುಗಳ ಉಪಯೋಗಕ್ಕಾಗಿ ನಿಸರ್ಗವನ್ನು ಬರಿದು ಮಾಡುತ್ತಿದ್ದಾನೆ ಎಂಬುದು ಕೂಡಾ ಸತ್ಯವಾದ ವಿಚಾರ.  ಕುಡಿಯುವ ನೀರು, ಪೆಟ್ರೋಲ್, ಗಿಡ, ಮರ, ಬೆಟ್ಟ ಗುಡ್ಡಗಳನ್ನೆ ಅಲ್ಲದೆ ತನ್ನಂತೆಯೇ ಇರುವ ಇತರ ಮನುಷ್ಯ ಜೀವಿಗಳನ್ನೂ  ಒಳಗೊಂಡಂತೆ ಎಲ್ಲ ತರಹದ ಜೀವಿಗಳನ್ನೂ ತನ್ನ ಅಹಮಿಕೆಯಲ್ಲಿ ಮರೆತು, ಶಕ್ತಿ ಮೀರಿ ಎಂಬಂತೆ ಪ್ರಾಕೃತಿಕ ಸಮತೋಲನವನ್ನು ಹಾಳುಗೆಡವಿ ವಿಶ್ವವನ್ನು ಬಿರುಸಿನಿಂದ ವಿನಾಶದೆಡೆಗೆ ಕೊಂಡೊಯ್ಯುತಿದ್ದಾನೆ.  ತನ್ನ ಬಯಕೆಗಳ ಪೂರೈಕೆ ವಿಚಾರ ಬಂದಾಗ ವಿಜ್ಞಾನವನ್ನು ಪೂಜಿಸಿ ಆರಾಧಿಸುವ ಸೋಗು ಹಾಕುವ ಮಾನವ, ತನ್ನ ನಡವಳಿಕೆಗಳ ವಿಚಾರ ಬಂದಾಗ ಮಾತ್ರ ವೈಜ್ಞಾನಿಕ ಚಿಂತನೆಯನ್ನು ಪಕ್ಕಕ್ಕಿಟ್ಟು ಕೆಲಸ ಮಾಡುತ್ತಿದ್ದಾನೆ.  ಇಂತಹ ವಿಜ್ಞಾನದ ದಿನಗಳು ವರ್ಷದ ಒಂದು ದಿನವಾಗುವುದಕ್ಕಿಂತ ಹೆಚ್ಚಾಗಿ ನಮ್ಮ ದೈನಂದಿನದಲ್ಲಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಅಂತರ್ಗತವಾಗಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. 

ಈ ವಿಚಾರದಲ್ಲಿ ಸರ್ ಸಿ. ವಿ. ರಾಮನ್ ಅವರ ಮಾತು ಮನನಯೋಗ್ಯವಾಗಿದೆ: “ವಿಜ್ಞಾನದ ತಿಳುವಳಿಕೆಯಿರುವ ಮನುಷ್ಯ ನಿಸರ್ಗದ ಸೌಂದರ್ಯವನ್ನು  ತನ್ನ ತಿಳುವಳಿಕೆಯ ಕಣ್ಣುಗಳಿಂದ ನೋಡುತ್ತಾನೆ ಮಾತ್ರವಲ್ಲ ಆ ಸೌಂದರ್ಯ ಮುದುಡಿಹೋಗದಂತೆ ಕೂಡಾ ಜಾಗರೂಕನಾಗಿರುತ್ತಾನೆ.  ಜ್ಞಾನವೆಂಬುದು ನಾವು ಜಗತ್ತನ್ನು ನೋಡುವ ರೀತಿಗೆ ಹೊಸ ದೃಷ್ಟಿ ಕೊಡುವುದರ ಜೊತೆಗೆ ಸೌಂದರ್ಯವನ್ನು ಆರಾಧಿಸುವ ಮನೋಭಾವವನ್ನೂ ಸೃಜಿಸುತ್ತದೆ”.  ನಾವು ಇಂತಹ ಪ್ರಾಜ್ಞತೆಯನ್ನು ಉಳಿಸಿಕೊಂಡಿದ್ದೇವೆಯೇ ಎಂಬ ಆತ್ಮಾವಲೋಕನ ಮಾತ್ರವೇ ನಿಜವಾದ ವಿಜ್ಞಾನ ದಿನದ ಆಚರಣೆಯಾದೀತು.

ಈ ಎಲ್ಲ ಚಿಂತನೆಗಳ ನಡುವೆ ನಮ್ಮ ಬದುಕನ್ನು ಹಸನು ಮಾಡಿರುವ ಸರ್ ಸಿ ವಿ ರಾಮನ್ ಅವರಂತಹ ಸಕಲ ಶ್ರೇಷ್ಠ ವಿಜ್ಞಾನ ತಪಸ್ವೀ ಋಷಿವರ್ಯರುಗಳಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸೋಣ.

Share:

ವಯಸ್ಸಿಗೆ ನಾಚಿಕೆ ಇದೆ! ಹಸಿವಿಗೆ ನಾಚಿಕೆ ಇಲ್ಲ

                                                                      ವಯಸ್ಸಿಗೆ ನಾಚಿಕೆ ಇದೆ! ಹಸಿವಿಗೆ ನಾಚಿಕೆ ಇಲ್ಲ !*

ಹೃದಯಸ್ಪರ್ಶಿ ಘಟನೆಯೊಂದು ಇಲ್ಲಿದೆ. ಡಿಸೆಂಬರ್‌ನ ಒಂದು ಮುಂಜಾನೆ. ನಾಲ್ಕೈದು ಹಿರಿಯರು ಪಾರ್ಕಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಒಬ್ಬ ವೃದ್ಧರು ಬಂದರು. ಅವರು ತೊಟ್ಟಿದ್ದ ಬಟ್ಟೆ ಯಾವುದೋ ಕಾಲದಲ್ಲಿ ಹೊಸದಾಗಿದ್ದಿರಬಹುದು. ಆದರೆ ಈಗ ಜೀರ್ಣಾವಸ್ಥೆಯಲ್ಲಿತ್ತು. ಅವರು ಹಿರಿಯರನ್ನು ಕುರಿತು ‘ಸ್ವಾಮಿ, ನಾನೊಂದು ಅನಾಥಾಲಯದ ಪರವಾಗಿ ಬಂದಿದ್ದೇನೆ. ಅನಾಥಾಲಯದಲ್ಲಿ ತಾಯ್ತಂದೆಯರಿಲ್ಲದ ಸುಮಾರು ಐವತ್ತು ಬಡ ಮಕ್ಕಳಿಗೆ ಉಚಿತ ಊಟ-ವಸತಿಯ ವ್ಯವಸ್ಥೆಯಿದೆ. ನಿಮ್ಮಂಥ ಸಜ್ಜನರು ಕೊಡುವ ದೇಣಿಗೆಗಳಿಂದಾಗಿ ಮಕ್ಕಳ ಊಟ-ತಿಂಡಿಗಳು ನಡೆಯುತ್ತವೆ. ಇನ್ನೇನು ಕ್ರಿಸ್ಮಸ್ ಬರುವುದರಲ್ಲಿದೆ.

ಅನುಕೂಲಸ್ಥರಾದ ನೀವೆಲ್ಲ ದೊಡ್ಡ ಮನಸ್ಸು ಮಾಡಿ ಒಂದಷ್ಟು ಹಣ ಕೊಟ್ಟರೆ ಬಡಮಕ್ಕಳಿಗೆ ಕೇಕ್ ಹಂಚುತ್ತೇವೆ. ನಿಮಗೆ ಬಿಡುವಿದ್ದರೆ ನೀವೇ ಅಂದು ಬಂದು ಮಕ್ಕಳಿಗೆ ಕೇಕ್ ಹಂಚಬಹುದು. ಅವರೊಂದಿಗೆ ಒಂದಷ್ಟು ಕಾಲ ಕಳೆಯಬಹುದು. ಮಕ್ಕಳೂ ನಿಮ್ಮ ಉಪಕಾರವನ್ನು ಸ್ಮರಿಸುತ್ತಾರೆ’ ಎಂದು ಹೇಳಿದರು. ಹಿರಿಯರೆಲ್ಲಾ ತಮ್ಮ ತಮ್ಮೊಳಗೇ ಮಾತನಾಡಿಕೊಂಡರು. ಐನೂರು ರುಪಾಯಿಗಳನ್ನು ಸಂಗ್ರಹಿಸಿ ಕೊಟ್ಟರು. ವೃದ್ಧರು ತಕ್ಷಣ ಹಣಕ್ಕೆ ರಸೀದಿ ಬರೆದು ಕೊಟ್ಟು, ಧನ್ಯವಾದ ಸಲ್ಲಿಸಿ, ಕ್ರಿಸ್ಮಸ್ ಹಬ್ಬದಂದು ಬರಬೇಕೆಂದು ಆಹ್ವಾನಿಸಿ ಹೊರಟರು.

ಕ್ರಿಸ್ಮಸ್ ಹಬ್ಬದ ದಿನ ಬಂದಿತು. ಆ ಹಿರಿಯರೆಲ್ಲಾ ಒಟ್ಟಾಗಿ ರಸೀತಿಯಲ್ಲಿದ್ದ ವಿಳಾಸವನ್ನು ಹುಡುಕಿಕೊಂಡು ಅನಾಥಾಲಯಕ್ಕೆ ಹೋದರು. ಆ ವಿಳಾಸದಲ್ಲಿ ಮನೆಯಿತ್ತು! ಅನಾಥಾಲಯ ಇರಲಿಲ್ಲ! ಆ ಮನೆಯವರು ‘ಸ್ವಾಮಿ, ಯಾರೋ ಮುದುಕಪ್ಪ ನಿಮ್ಮೆಲ್ಲರಿಗೂ ಟೋಪಿ ಹಾಕಿದ್ದಾನೆ. ಹೀಗೆ ಅನಾಥಾಲಯಕ್ಕೆ ದೇಣಿಗೆ ಕೊಟ್ಟು, ಅದನ್ನು ಹುಡುಕಿಕೊಂಡು ಬಂದವರಲ್ಲಿ ನೀವೇ ಮೊದಲನೆಯವರಲ್ಲ. ಬಹಳಷ್ಟು ಜನ ಬಂದು ಹೋಗಿದ್ದಾರೆ. ಆ ಪಾಪಿ ಮುದುಕನಿಗೆ ನಮ್ಮ ಮನೆಯ ವಿಳಾಸ ಹೇಗೆ ಸಿಕ್ಕಿತೋ ಗೊತ್ತಿಲ್ಲ’ ಎಂದುಬಿಟ್ಟರು.

ಹಿರಿಯರೆಲ್ಲಾ ತಾವು ಮೋಸ ಹೋದೆವು ಎಂದುಕೊಳ್ಳುತ್ತಾ ಹಿಂತಿರುಗಿದರು. ಇದಾದ ಮೂರ್ನಾಲ್ಕು ತಿಂಗಳ ನಂತರ ಪಾರ್ಕಿನ ಹಿರಿಯರಲ್ಲೊಬ್ಬರಿಗೆ ಗಾಂಧಿಬಜಾರಿನಲ್ಲಿ ಅದೇ ವೃದ್ಧರು ಕಂಡರು. ಹಿರಿಯರು ಅವರನ್ನು ಗುರುತಿಸಿದರು. ಅವರಿಗೆ ಇವರ ಗುರುತಾಗಲಿಲ್ಲ! ವೃದ್ಧರ ಕೈಯಲ್ಲಿ ಅದೇ ರಸೀದಿ ಪುಸ್ತಕವಿತ್ತು. ಅವರೀಗ ಅನಾಥಾಲಯದ ಮಕ್ಕಳಿಗೆ ಯುಗಾದಿ ಹಬ್ಬಕ್ಕೆ ಒಬ್ಬಟ್ಟಿನ ಊಟ ಹಾಕಿಸಿ ಎಂದು ಹೇಳುತ್ತಾ ಹಣ ಸಂಗ್ರಹಿಸುತ್ತಿದ್ದರು. ಹಿರಿಯರು ‘ಹೀಗೆಲ್ಲ ಸುಳ್ಳು ಹೇಳಿ ಹೊಟ್ಟೆ ಹೊರೆಯುತ್ತೀರಲ್ಲಾ? ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮನ್ನು ಪೋಲೀಸರಿಗೆ ಒಪ್ಪಿಸಿ, ಸೆರೆಮನೆಗೆ ಕಳುಹಿಸುತ್ತೇನೆ’ ಎಂದು ಗದರಿಸಿದರು.

ಆ ವೃದ್ಧರು ‘ಸರ್, ನೀವು ನನ್ನನ್ನು ಬಯ್ಯುವುದರಲ್ಲಿ, ಬೆದರಿಸುವುದರಲ್ಲಿ ಏನೂ ತಪ್ಪಿಲ್ಲ. ಆದರೆ ನನ್ನೆರಡು ಮಾತುಗಳನ್ನು ಕೇಳಿ. ನಾನು ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದೆ. ನನಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ನಾನು ನನ್ನ ಹೆಂಡತಿ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದೆವು. ಓದಿಸಿದೆವು.  ಈಗೆಲ್ಲ ಅವರು ಬೆಳೆದು ದೊಡ್ಡವರಾಗಿದ್ದಾರೆ. ಉದ್ಯೋಗಗಳಲ್ಲಿದ್ದಾರೆ. ನಮ್ಮಿಂದ ದೂರವಾಗಿ ಬೇರೆಯಾಗಿ ಬದುಕುತ್ತಿದ್ದಾರೆ. ನಾನು ನನ್ನ ಮುದಿ ಹೆಂಡತಿ ಇಬ್ಬರೇ ಉಳಿದುಕೊಂಡಿದ್ದೇವೆ. ನನಗೀಗ ಯಾವ ಸಂಪಾದನೆಯೂ ಇಲ್ಲ. ಭಿಕ್ಷೆ ಬೇಡಲು ಹೋದರೆ ಈ ವಯಸ್ಸಿನಲ್ಲಿ ಭಿಕ್ಷೆ ಬೇಡಲು ನಾಚಿಕೆಯಾಗುವುದಿಲ್ಲವೇ? ಎಂದು ಕೇಳುತ್ತಾರೆ.

ವಯಸ್ಸಿಗೆ ನಾಚಿಕೆಯಿದೆ! ಹೊಟ್ಟೆ ಹಸಿವಿಗೆ ನಾಚಿಕೆಯಿಲ್ಲ! ನೀವು ನನ್ನನ್ನು ಪೋಲೀಸರಿಗೆ ಒಪ್ಪಿಸಿ. ಸೆರೆಮನೆಗೆ ಕಳುಹಿಸಿ. ಅಲ್ಲಾದರೂ ನನಗೆ ಎರಡು ಹೊತ್ತು ಊಟ ಸಿಗಬಹುದು. ಆದರೆ ನನ್ನ ಮುದಿ ಹೆಂಡತಿಗೆ ಯಾರು ಊಟ ಕೊಡುತ್ತಾರೆ?’ ಎಂದು ಹೇಳಿ ಕಣ್ಣೀರು ಸುರಿಸಿದರು. ಅವರ ಮಾತುಗಳನ್ನು ಕೇಳುತ್ತಾ ಹಿರಿಯರ ಕಣ್ಣುಗಳೂ ತುಂಬಿ ಬಂದವು. ಅವರು ನಾಚಿಕೆಯಾಗಬೇಕಾದದ್ದು ಅವರಿಗೋ ಅಥವಾ ಅವರ ಅಸಹಾಯಕ ಪರಿಸ್ಥಿತಿಗೆ ಕಾರಣವಾದವರಿಗೋ ಎಂದು ಯೋಚಿಸಿದರಂತೆ. ಉತ್ತರ ಸಿಗದೆ ಪೇಚಾಡಿದರಂತೆ.                                         ಕೃಪೆ: ಷಡಕ್ಷರಿ.                                                 ಸಂಗ್ರಹ: ವೀರೇಶ್ ಅರಸಿಕೆರೆ.
Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com