
ಪ್ರತಿ ವರ್ಷ ಅಕ್ಟೋಬರ್ ೯ನೇ ತಾರೀಕಿನಂದು ವಿಶ್ವ ಅಂಚೆ ದಿನವೆಂದು ಆಚರಿಸಲಾಗುತ್ತದೆ. ೧೮೭೪ರ ಇದೇ ದಿನಾಂಕದಂದು ಸ್ವಿಟ್ಜರ್‌ಲೆಂಡಿನ ಬ್ರೆನ್ ನಗರದಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯು. ಪಿ. ಯು.) ಸ್ಥಾಪನೆಯಾಗಿತ್ತು. ಈ ಸಂಸ್ಥೆ ಜಾಗತಿಕ ಸಂವಹನ ಕ್ರಾಂತಿಗೆ ದೊಡ್ಡ ಕೊಡೆಗೆಯನ್ನು ನೀಡಿದೆ. ಅದರ ಜ್ಞಾಪಕಾರ್ಥವಾಗಿ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ೧೯೬೯ರಲ್ಲಿ ಜಪಾನ್ ದೇಶದ ಟೋಕಿಯೋ ನಗರದಲ್ಲಿ ನಡೆದ ಯು.ಪಿ.ಯು ಸಮ್ಮೇಳನದಲ್ಲಿ ಅಕ್ಟೋಬರ್ ೯ರಂದು ಮೊದಲ ವಿಶ್ವ ಅಂಚೆ ದಿನವೆಂದು ಘೋಷಿಸಲಾಯಿತು.
ಯು.ಪಿ.ಯು ಯುನೈಟೆಡ್ ನೇಶನ್ಸ್‌ನ ಒಂದು ಅಂಗ ಸಂಸ್ಥೆಯಾಗಿದ್ದು ಪ್ರಪಂಚದಾದ್ಯಂತ ಅಂಚೆ ಜಾಲವನ್ನು ಹೊಂದಿದೆ. ಇದು ವಿಶ್ವದ ಎರಡನೆಯ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಇದು ೧೯೨ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಅಂಚೆ ಸಂವಹನದ ನಿಯಮಾವಳಿಗಳನ್ನು ಈ ಸಂಸ್ಥೆ ನಿರ್ಣಯಿಸುತ್ತದೆ.
ಇಂದು ಬದಲಾವಣೆಯ ಗಾಳಿ ಎಲ್ಲ ರಂಗಗಳಲ್ಲೂ ಬೀಸತೊಡಗಿದೆ. ಇದಕ್ಕೆ ಅಂಚೆ ಸೇವೆಯೂ ಹೊರತಲ್ಲ. ಮನೆಯವರು, ಬಂಧು ಮಿತ್ರರು, ಸ್ನೇಹಿತರು, ಪ್ರೇಮಿಗಳು, ಕೋರ್ಟು ಕಛೇರಿ ವ್ಯವಹಾರಸ್ಥರು ದಿನ-ವಾರ-ತಿಂಗಳುಗಳ ಕಾಲ ತಮ್ಮವರಿಂದ ಬರುವ ಒಂದು ಪತ್ರಕ್ಕಾಗಿ ಕಾಯುವ ಪರಿಸ್ಥಿತಿ ಈಗ ಬಹಳ ವಿರಳವಾಗಿದೆ. ಡಿಜಿಟಲ್ ಕ್ರಾಂತಿಯಿಂದಾಗಿ ಇಂದು ಅಂಚೆ ಕಾಗದಗಳಿಗಾಗಿ ಕಾಯುವ ಪರಿಸ್ಥಿತಿ ಇಲ್ಲ. ದಶಕಗಳ ಹಿಂದೆ ಸ್ಥಿರ ದೂರವಾಣಿ ಸೌಲಭ್ಯ ಮತ್ತು ಕಂಪ್ಯೂಟರ್ ಆಧಾರಿತ ಅಂತರ್ಜಾಲ ವ್ಯವಸ್ಥೆ ಸಂಪರ್ಕಕ್ಕೆ ಹೊಸ ವೇಗವನ್ನು ನೀಡಿದವು. ಆದರೆ ಇವು ಎಲ್ಲರ ಕೈಗೆಟುಕುವ ಸ್ಥಿತಿ ಇರಲಿಲ್ಲ. ಆದರೆ ಇಂದಿನ ಕಾಲಘಟ್ಟದಲ್ಲಿ ನಾವು ಮೊಬೈಲ್, ಸ್ಮಾರ್ಟ್‌ಫೋನುಗಳ ಮೂಲಕ ಸಂಪರ್ಕದ ಹೊಸ ಹೊಸ ದಾರಿಗಳನ್ನು ಕಂಡುಕೊಂಡಿದ್ದೇವೆ. ಕೇವಲ ಇ-ಮೇಲ್‌ಗಳಲ್ಲದೆ, ವಾಟ್ಸಾಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಮುಖಾಂತರ ಸಂಪರ್ಕ ಸಾಧ್ಯವಾಗಿದೆ. ಮೊಬೈಲ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳು ಪೈಪೋಟಿಗೆ ಬಿದ್ದು ದರಗಳನ್ನು ಕಡಿಮೆಗೊಳಿಸುತ್ತಿವೆ. ಹಾಗಾಗಿ ಬಡವರು-ಶ್ರೀಮಂತರೆಂಬ ಭೇದವಿಲ್ಲದೆ ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಸಂಪರ್ಕ ಕ್ಷೇತ್ರದಲ್ಲಾದ ಕ್ಷಿಪ್ರ ಕ್ರಾಂತಿಯಿಂದ ಸಾಂಪ್ರದಾಯಿಕ ಅಂಚೆ ಸೇವೆ ಮಂಕಾಗಿರುವುದು ನಮ್ಮ ಮುಂದಿರುವ ವಾಸ್ತವ. ನಮ್ಮಲ್ಲಿ ಅಂಚೆ ಇಲಾಖೆ ಅಂಚೆ, ಟೆಲಿಗ್ರಾಂ, ಮನಿ ಆರ್ಡರ್, ಕೆಲವು ಹಣ ಉಳಿತಾಯ ಯೋಜನೆಗಳ ಸೀಮಿತತೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಈ ಪೈಕಿ ಕೆಲವು ಸೇವೆಗಳು ನಿಂತು ಹೋಗಿವೆ. ಜಾಗತೀಕರಣದಿಂದ ಜನರಲ್ಲಿ ಕೊಳ್ಳಬಾಕತನ ಹೆಚ್ಚಿದ ಮೇಲೆ ಈ ಬದಲಾವಣೆಯನ್ನು ನಿರ್ವಹಿಸಲು ಬೇಕಾದ ಸಿದ್ಧತೆಗಳು ನಮ್ಮ ಅಂಚೆ ಇಲಾಖೆಯ ಬಳಿ ಇದ್ದಂತಿಲ್ಲ. ಇಂದು ಜನ ಆನ್‌ಲೈನ್ ಶಾಂಪಿಂಗ್ ಮುಖಾಂತರ ವಸ್ತುಗಳನ್ನು ಖರೀಧಿಸುತ್ತಾರೆ. ಅವು ನಿಗದಿತ ಸಮಯಕ್ಕೆ ಕೊಳ್ಳುಗರನ್ನು ತಲುಪುವ ಸೇವೆಗಳು ಲಭ್ಯವಿವೆ. ಈ ಬಗೆಯ ಬದಲಾವಣೆಯನ್ನು ಎದುರಿಸಲು ವಿಶ್ವದ ಕೆಲವು ದೇಶಗಳಲ್ಲಿ ಅಲ್ಲಿನ ಅಂಚೆ ಇಲಾಖೆಗಳು ಖಾಸಗಿ ಸಹಬಾಗಿತ್ವಕ್ಕೆ ಮೊರೆಹೋದ ಉದಾಹರಣೆಗಳೂ ಸಾಕಷ್ಟು ಸಿಗುತ್ತವೆ. ಜಪಾನ್ ಪೋಸ್ಟ್ ಆಸ್ಟ್ರೇಲಿಯಾದ ಟೋಲ್ ಹೋಲ್ಡಿಂಗ್ಸ್ ಎಂಬ ಖಾಸಗಿ ಸಂಸ್ಥೆಯನ್ನು ಖರೀಧಿಸಿತು; ಯುನೈಟೆಡ್ ಸ್ಟೇಟ್ಸ್‌ನ ಅಂಚೆ ಇಲಾಖೆ ಅಮೇಜಾನ್ ಡಾಟ್ ಕಾಂ ಜೊತೆ ಒಪ್ಪಂದ ಮಾಡಿಕೊಂಡಿದೆ; ಆಸ್ಟೇಲಿಯಾದ ಅಂಚೆ ಇಲಾಖೆ ಚೀನಾದ ಆಲಿಬಾಬಾ ಎಂಬ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇಂತಹ ಎಲ್ಲ ಬದಲಾವಣೆ ಮತ್ತು ಸವಾಲುಗಳ ನಡುವೆ ನಾವು ಮತ್ತೊಮ್ಮೆ ವಿಶ್ವ ಅಂಚೆ ದಿನವನ್ನು ಎದುರುಗೊಳ್ಳುತ್ತಿದ್ದೇವೆ. ಈ ದಿನವನ್ನು ಜನರು ಮತ್ತು ವ್ಯವಹಾರಗಳಲ್ಲಿ ಅಂಚೆಯ ಕೊಡುಗೆಯ ಕುರಿತು ಅರಿವು ಮೂಡಿಸುವುದೇ ಆಗಿದೆ. ಅಂಚೆ ಇಲಾಖೆಗಳು ಎಲ್ಲ ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಕೊಡುಗೆಗಳನ್ನು ನೀಡಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿ ವರ್ಷವೂ ಒಂದೊಂದು ವಿಷಯವನ್ನು ಗುರಿಯಾಗಿಸಿಕೊಡು ವಿಶ್ವ ಅಂಚೆ ದಿನ ಆಚರಿಸಲ್ಪಡುತ್ತದೆ. ಜಾಗತಿಕ ಮಟ್ಟದಲ್ಲಿ ಹಸಿವು, ಬಡತನ, ಅನ್ಯಾಯ, ಹವಾಮಾನ ವೈಪರೀತ್ಯ ಮೊದಲಾದವುಗಳ ವಿರುದ್ಧ ಹೋಡಲು ಇಂಬು ನೀಡುತ್ತಿದೆ ಎಂಬುದು ಈ ದಿನವನ್ನು ಇನ್ನಷ್ಟು ವಿಶಿಷ್ಟವಾಗಿಸಿದೆ.
🙏 *ಮಾಹಿತಿ ವೇದಿಕೆ*🌺
*ಇಂದು ವಿಶ್ವ ಅಂಚೆ ದಿನ*✍
*ವಿಸ್ತರಿಸಲ್ಪಟ್ಟ ಅಂಚೆಸೇವೆಗಳು*✍
*2016- ಇಂಡಿಯಾ ಪೋಸ್ಟ್ ಎಟಿಎಂ ಸೇವೆ*
*1863- ರೈಲ್ವೆ ಮೇಲ್ ಸರ್ವೀಸ್ (ಆರ್ಎಂಎಸ್)*
*1876- ಪಾರ್ಸಲ್ ಪೋಸ್ಟ್ ಯುನಿಟ್ ಸ್ಥಾಪನೆ*
*1879- ಪೋಸ್ಟ್ ಕಾರ್ಡ್ ಪ್ರಾರಂಭ*
*1880- ಮನಿ ಆರ್ಡರ್ ಸೇವೆ ಆರಂಭ1911- ಮೊದಲ ಏರ್ವೆುೕಲ್ ಸೇವೆ ಪ್ರಾರಂಭ (ಅಲಹಾಬಾದ್ನಿಂದ ನೈನಿ)*
*1935- ಭಾರತೀಯ ಪೋಸ್ಟಲ್ ಆರ್ಡರ್ ಶುರು*
*1972- ಪಿನ್ಕೋಡ್ ಜಾರಿಗೆ*
*1984- ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಆರಂಭ*
*1985- ಪ್ರತ್ಯೇಕವಾದ ಅಂಚೆ ಮತ್ತು ದೂರವಾಣಿ ಇಲಾಖೆಗಳು*
*1986- ಸ್ಪೀಡ್ ಪೋಸ್ಟ್ ಸೇವೆ*
*1990- ಮುಂಬೈ, ಚೆನ್ನೈನಲ್ಲಿ 2 ಸ್ವಯಂಚಾಲಿತ ಅಂಚೆ ಆವೃತ್ತಿ ಸ್ಥಾಪನ*
*1995- ಗ್ರಾಮೀಣ ಅಂಚೆ ವಿಮ*
*1996- ಮೀಡಿಯಾ ಪೋಸ್ಟಲ್ ಸರ್ವೀಸ್*
*1997- ಬ್ಯುಸಿನೆಸ್ ಪೋಸ್ಟಲ್ ಸರ್ವೀಸ್*
*1998- ಡಾಟಾ ಡಾಕ್ ಮತ್ತು ಎಕ್ಸ್ಪ್ರೆಸ್ ಡಾಕ್ ಸೇವೆ*
*2000- ಗ್ರೀಟಿಂಗ್ ಪೋಸ್ಟ್ ಸೇವೆ*
*2001- ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್*
*2002- ಇಂಟರ್ನೆಟ್ ಆಧಾರಿತ ಟ್ರ್ಯಾಕ್ ಮತ್ತು ಟ್ಯಾಕ್ಸ್ ಸೇವ*
*2003- ಬಿಲ್ ಮೇಲ್ ಸರ್ವೀಸ್*
*2004- ಇ-ಪೋಸ್ಟಲ್ ಸರ್ವೀಸ್2004- ಲಾಜಿಸ್ಟಿಕ್ ಪೋಸ್ಟ್ ಸರ್ವೀಸ್*
ಅಂಚೆ ಎನ್ನುವ ಹೆಸರು ಹೇಗೆ ಬಂತು ಗೊತ್ತೇ?
ಪ್ರಸ್ತುತದ ಕನ್ನಡ ಭಾಷೆಯಲ್ಲಿ “ಅಂಚೆ” ಎಂದರೆ Postal, ಟಪಾಲು ಎಂಬ ಅರ್ಥವಿದೆ. ಕನ್ನಡ ಪಂಡಿತರ ಅಥವಾ ನಿಘಂಟುಗಳ ಮೊರೆ ಹೋದರೆ “ಅಂಚೆ” ಎಂಬ ಪದಕ್ಕೆ ‘ಹಂಸ’ ಎಂಬ ಅರ್ಥ ಸಿಗುತ್ತದೆ. ಹಂಸ ನೀರಿನಲ್ಲಿರುವ ಬಾತುಕೋಳಿಯ ಇನ್ನೊಂದು ಹೆಸರು. ಆದರೆ, ಟಪಾಲು/Postal ವಿಭಾಗಕ್ಕೆ ‘ಅಂಚೆ’ ಎಂಬ ಹೆಸರು ಹೇಗೆ ಬಂತೆಂಬುದರ ಹಿಂದೆ ಸ್ವಾರಸ್ಯಕರ ಸಂಗತಿ ಒಂದಿದೆ.
ಹೌದು, ಕ್ರಿ. ಶ. 1672 ರವರೆಗೆ ‘ಅಂಚೆ’ ಎಂಬುದರ ಅರ್ಥ ‘ಹಂಸ’ ಮಾತ್ರ. ಅಂದಿಗೆ ಕನ್ನಡ ನಾಡು (ಕನ್ನಡ ಮಾತನಾಡುವ ರಾಜ್ಯ) ಎನಿಸಿಕೊಂಡಿದ್ದ ಮೈಸೂರು ಸಂಸ್ಥಾನದ ದೊರೆಗಳಾದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ರಾಜ್ಯದ Postal Department/ಟಪಾಲು ವಿಭಾಗವನ್ನು ಸ್ಥಾಪಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು.
ಈ ವಿಭಾಗಕ್ಕೆ ಹೆಸರೇನಿಡಬೇಕೆಂಬ ವಿಚಾರ ಬಂದಾಗ ಅವರ ತಲೆಗೆ ಹೊಳೆದದ್ದು ನಮ್ಮ ಪುರಾಣಗಳಲ್ಲಿ ಅಮರ ಪ್ರೇಮಿಗಳೆನಿಸಿಕೊಂಡ ನಳ-ದಮಯಂತಿಯರು. ಈ ಪ್ರೇಮಿಗಳ ನಡುವೆ ಪ್ರೀತಿಯ ಸಂಕೇತ ಹಾಗೂ ಸಂದೇಶ ವಾಹಕವಾಗಿದ್ದ ‘ಹಂಸೆ’ ಅಥವಾ ‘ಅಂಚೆ’ ಯನ್ನು ಮೈಸೂರು ರಾಜ್ಯದ Postal ವಿಭಾಗದ ಹೆಸರಾಗಿ ಆಯ್ಕೆ ಮಾಡಲಾಯಿತು. ಹೀಗೆ ಅಂದು ನಾಮಕರಣಗೊಂಡ ‘ಅಂಚೆ ವಿಭಾಗ’ ಕನ್ನಡದಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದೆ. ಅಬ್ಬಾ!! ರಾಜ್ಯದ ವ್ಯವಸ್ಥೆಯ ಒಂದು ವಿಭಾಗಕ್ಕೆ ಎಂತಹ ರೋಮಾಂಚನೀಯ, ಭಾವನಾತ್ಮಕ ಹೆಸರು!!
ಒಂದು ಸ್ಥಳವಾಗಲಿ, ರಸ್ತೆಯಾಗಲಿ, ಯೋಜನೆಯಾಗಲಿ ಅಥವಾ ವ್ಯವಸ್ಥೆಯ ವಿಭಾಗವಾಗಲಿ, ಹೆಸರಿಡುವುದರಲ್ಲಿ ಎಷ್ಟು ಸೃಜನಶೀಲ ಹಾಗೂ ಭಾವನಾತ್ಮಕವಾಗಿರಬೇಕೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ.
ಈ ವಿಷಯವನ್ನು ನಾನು ಓದುತ್ತಿರುವಾಗ, 10ನೇ ತರಗತಿಯಲ್ಲಿ ಕನ್ನಡದ ಮೇಷ್ಟ್ರು ಹೇಳಿಕೊಟ್ಟ ತತ್ಸಮ-ತದ್ಭವ ಪಾಠಗಳು ನೆನಪಾದವು. ‘ಹಂಸ’ ಎಂಬುದು ಸಂಸ್ಕ್ರತ ಪದ. ರೂಪಾಂತರಗೊಂಡು ಕನ್ನಡಕ್ಕೆ ಬಂದಾಗ ‘ಅಂಚೆ’ಯಾಯಿತು.
ವ್ಯವಸ್ಥೆಯ ಒಂದು ವಿಭಾಗಕ್ಕೆ ಅದನ್ನು ಹೆಸರಾಗಿ ಬಳಸಿಕೊಂಡಾಗ ಕಾಲಕ್ರಮೇಣ ಮೂಲ ಅರ್ಥವೇ ಕಳೆದು ಹೊಸ ಅರ್ಥ ಬಂದಂತಿದೆ. ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಭಾಷೆಯ ಮೇಲೆ ಬೀರುವ ಪರಿಣಾಮಗಳಿಗೆ ‘ಅಂಚೆ’ ಕೈಗನ್ನಡಿಯಂತಿದೆ. ಇದೇ ಅಲ್ಲವೇ ಭಾಷೆಯ ವಿಕಸನ!
ಶೃತಿ ಹೆಚ್ ಎಂ







No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you