For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಕರ್ನಾಟದ ಏಕೀಕರಣ :

ಮೈಸೂರು ಕರ್ನಾಟಕವಾದ ಕಥೆ
ಇವತ್ತು ಯಾವುದನ್ನು ನಾವು ವಿಶಾಲ ಕರ್ನಾಟಕ, ಅಖಂಡ ಕರ್ನಾಟಕ ಎಂದು ಕರೆಯುತ್ತೇವೆಯೋ ಅದು ಆರು ದಶಕಗಳ ಹಿಂದೆ ಸುಮಾರು 20 ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಕನ್ನಡಿಗರ ಒಂದು ಪ್ರತ್ಯೇಕ ರಾಜ್ಯವೆಂಬುದು ಅಸ್ತಿತ್ವದಲ್ಲೇ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತಿದೆಯೇ? ಸ್ವಂತ ರಾಜ್ಯ ಹೊಂದುವ ಕನಸು ಮೊಳೆತು, ಚಿಗುರಿ, ಹಬ್ಬಿ, ಹೂವಾಗಿ, ಕಾಯಾಗಿ, ಹಣ್ಣಾದ ಘಟನೆಗಳ ಹಿಂದಿನ ಸಂಕ್ಷಿಪ್ತ ಚಿತ್ರಣ ಇಲ್ಲಿದೆ:

ಅದೊಂದು ಸಮೃದ್ಧ ಕನಸು
ಕನ್ನಡ ಮಾತನಾಡುವ ಜನರೆಲ್ಲ ಒಂದೇ ಪ್ರದೇಶಕ್ಕೆ ಸೇರಬೇಕೆಂಬ ಕನಸು ಮೊಳೆತಾಗ ಇದು ನಮ್ಮ ನೆಲ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತುಪಡಿಸಿ ಬೇರೆ ನಿರ್ದಿಷ್ಟ ಪ್ರದೇಶವೇ ಇದ್ದಿಲ್ಲ. ಉಳಿದ ಪ್ರಾಂತ್ಯಗಳ ಆಡಳಿತದಲ್ಲಿ ಕನ್ನಡ, ಕನ್ನಡಿಗರಿಗೆ ಪ್ರಾಧಾನ್ಯತೆ ಇರಲಿಲ್ಲ.

ಈ ಸಂದರ್ಭದಲ್ಲಿ ಕನ್ನಡದ ಪರವಾಗಿ ಕೆಲಸ ಮಾಡಿದ ಕೆಲ ಮಹನೀಯರನ್ನು ನೆನೆಯಲೇಬೇಕು. ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನ್ರೋ, ಜಾನ್ ಎ. ಡನ್‌ಲಪ್, ಗ್ರೀನ್ ಹಿಲ್ ಆರ್. ಗ್ರಾಂಟ್, ಡಬ್ಲ್ಯು. ಎ. ರಸೆಲ್, ಜೆ. ಎಫ್. ಫ್ಲೀಟ್‌ರಂತಹ ಬ್ರಿಟಿಷ್ ಅಧಿಕಾರಿಗಳು ಕನ್ನಡ ಕಟ್ಟುವ ಕೆಲಸ ಮಾಡಿದರು. ಅವರಿಗೆ ಕೈ ಜೋಡಿಸಿದ್ದು ಚೆನ್ನಬಸಪ್ಪನವರಂತಹ ಕನ್ನಡಿಗ ಅಧಿಕಾರಿ. ಜೊತೆಗೆ, ರಾ. ಹ. ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಆಲೂರು ವೆಂಕಟರಾವ್ ಮುಂತಾದ ಹಿರಿಯರು ಕನ್ನಡ ಮಾತನಾಡುವ ಜನರೆಲ್ಲರನ್ನೂ ಹೊಂದಿರುವ ಒಂದು ಪ್ರಾಂತ್ಯ ರಚನೆಯಾಗಬೇಕೆಂದು ಕನಸು ಕಂಡರು. 

ಕರ್ನಾಟಕ ಏಕೀಕರಣದ ಕನಸು ಮೊಳೆತಿದ್ದು ಹೀಗೆ. ಜೊತೆಗೆ, ಇಂಥದೊಂದು ಕನಸು ಮೊಳೆಯಲು ಕೆಲ ಐತಿಹಾಸಿಕ ಘಟನೆಗಳೂ ಕಾರಣವಾಗಿವೆ.

1905ರಲ್ಲಿ ಬ್ರಿಟಿಷ್ ಸರ್ಕಾರ ಪ್ರಸ್ತಾಪಿಸಿದ್ದ ಬಂಗಾಳ ರಾಜ್ಯದ ವಿಭಜನೆ. ಇದನ್ನು ಪ್ರತಿಭಟಿಸಿದ ಬಂಗಾಳಿಗಳು 'ವಂಗಭಂಗ' ಎಂದು ದೊಡ್ಡ ಚಳವಳಿಯನ್ನೇ ರೂಪಿಸಿದರು. ಹೋರಾಟ ತೀವ್ರಗೊಂಡಾಗ, ಮಣಿದ ಬ್ರಿಟಿಷ್ ಸರ್ಕಾರ 1912ರಲ್ಲಿ ಬಂಗಾಳವನ್ನು ಪುನಃ ಒಂದು ಮಾಡಿತು. ಕನ್ನಡಿಗರನ್ನು ಒಂದೆಡೆ ಸೇರಿಸುವ ಕನಸು ಹೊತ್ತಿದ್ದವರಿಗೆ ಈ ಘಟನೆ ದೊಡ್ಡ ಪ್ರೇರಣೆಯಾಯಿತು. 

ಕರ್ನಾಟಕ ವಿದ್ಯಾವರ್ಧಕ ಸಂಘ
ಕರ್ನಾಟಕ ರೂಪುಗೊಳ್ಳಲು ಕಾರಣರಾದವರ ಪೈಕಿ ಒಬ್ಬರಾದ ರಾ. ಹ. ದೇಶಪಾಂಡೆ ಹಾಗೂ ಕೆಲವು ಸಮಾನ ಮನಸ್ಕರು ಒಂದೆಡೆ ಸೇರಿದರು. ಕನ್ನಡ ಭಾಷೆಯ ದುಃಸ್ಥಿತಿ ದೂರ ಮಾಡಲೆಂದು 1890ರಲ್ಲೇ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಸ್ಥಾಪಿಸಿದ್ದರು. ಕನ್ನಡದಲ್ಲಿ ಶಿಕ್ಷಣ ಪ್ರಸಾರಕ್ಕೆ ಪ್ರೋತ್ಸಾಹ, ಪ್ರಾಚೀನ ಕನ್ನಡ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ, ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ, ಉತ್ತಮ ಮತ್ತು ಉಪಯುಕ್ತ ಕೃತಿಗಳ ಅನುವಾದ ಹಾಗೂ ಪ್ರಕಟಣೆಗೆ ಪ್ರೋತ್ಸಾಹ, ಗ್ರಂಥ ಭಂಡಾರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ನೆರವು ನೀಡುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿತ್ತು. ಲೇಖಕರನ್ನು ಬೆಳೆಸಿದ ಸಂಘ, ಕನ್ನಡ ಗ್ರಂಥಗಳ ಭಾಷೆಯಲ್ಲಿ ಏಕರೂಪತೆ ಇರಬೇಕೆಂಬ ಕಾರಣದಿಂದ 1907ರ ಜೂನ್ ತಿಂಗಳ ಮೊದಲ ವಾರದಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಮೊದಲ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿತು.

ಕನ್ನಡ ಸಾಹಿತ್ಯ ಪರಿಷತ್ತು
ನಂತರದ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂಬ ಪ್ರಯತ್ನದ ಫಲವಾಗಿ 1915ರಲ್ಲಿ ಸ್ಥಾಪನೆಯಾದದ್ದು ಕರ್ನಾಟಕ ಸಾಹಿತ್ಯ ಪರಿಷತ್ತು. ಮುಂದೆ ಇದು ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರು ಬದಲಾಯಿಸಿಕೊಂಡಿತು. ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಪರವಾಗಿ ದನಿ ಎತ್ತುವ ಮೂಲಕ ಏಕೀಕರಣದ ಬೇಡಿಕೆಗೆ ಪರಿಷತ್ತು ವೇದಿಕೆ ಕಲ್ಪಿಸಿತು. 

ಕರ್ನಾಟಕ ಕುಲ ಪುರೋಹಿತ
ಎಲ್ಲರಿಗಿಂತ ಪ್ರಮುಖ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ಎಂದರೆ 'ಕರ್ನಾಟಕದ ಗತವೈಭವ' ಗ್ರಂಥ ರಚಿಸಿದ ಕರ್ನಾಟಕ 'ಕುಲ ಪುರೋಹಿತ' ಆಲೂರು ವೆಂಕಟರಾಯರು. ಕರ್ನಾಟಕ ಏಕೀಕರಣದ ಬಗ್ಗೆ ಕನಸು ಕಂಡಿದ್ದಲ್ಲದೇ ಅದರ ಸಾಕಾರಕ್ಕೆ ದುಡಿದ ಹಿರಿಯ ಜೀವ ಇದು. ಆಲೂರು ವೆಂಕಟರಾಯರು, ಗದಿಗೆಯ್ಯ ಹೊನ್ನಾಪುರಮಠ ಮತ್ತು ಕಡಪಾ ರಾಘವೇಂದ್ರರಾಯರು ಸೇರಿ 1916ರಲ್ಲಿ ಸ್ಥಾಪಿಸಿದ 'ಕರ್ನಾಟಕ ಸಭೆ' ಕರ್ನಾಟಕ ಏಕೀಕರಣದ ಬೇಡಿಕೆಗೆ ಇಂಬು ಕೊಟ್ಟಿತು. ರಾಜಕೀಯ ಬೆಂಬಲವನ್ನೂ ಪಡೆದಿದ್ದ ಕರ್ನಾಟಕ ಸಭೆಯು ಏಕೀಕರಣದ ವಿಷಯದಲ್ಲಿ ಹಲವಾರು ಹೋರಾಟಗಳನ್ನು ನಡೆಸಿತು. ಇದರ ಪ್ರೇರಣೆಯಿಂದ ನಾಡಹಬ್ಬಗಳು ನಡೆದವು. ಸಕ್ಕರಿ ಬಾಳಾಚಾರ್ಯ, ಡಾ. ಯು. ರಾಮರಾವ್, ಮುದವೀಡು ಕೃಷ್ಣರಾವ್, ಕಡಪಾ ರಾಘವೇಂದ್ರ ರಾವ್, ಮಂಗಳವೇಡೆ ಶ್ರೀನಿವಾಸರಾವ್ ಮುಂತಾದ ಹಿರಿಯರು ಸಭೆಯ ಜೊತೆ ಗುರುತಿಸಿಕೊಂಡಿದ್ದರು.

ಬ್ರಿಟಿಷರೂ ಬಯಸಿದ್ದರು
1918ರಲ್ಲೇ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂಬಂಧ ಮಾಂಟೆಗ್ಯೂ-ಚೆಲ್ಮ್ಸ್‌ಫರ್ಡ್ ಸಮಿತಿ ನೇಮಕಗೊಂಡಿತ್ತು. ಆ ಸಮಿತಿಯು ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸುವುದು ಅಗತ್ಯ ಎಂದು ಶಿಫಾರಸು ಮಾಡಿತು. ಇದನ್ನು ಆಗಿನ ಬ್ರಿಟಿಷ್ ಸರ್ಕಾರ ಕೂಡ ಒಪ್ಪಿಕೊಂಡಿತ್ತು. 1920ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನ ಏಕೀಕರಣದ ನಿಟ್ಟಿನಲ್ಲಿ ಒಂದು ಮಹತ್ವದ ವೇದಿಕೆ. ಕರ್ನಾಟಕ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು, ಬ್ರಿಟಿಷ್ ಆಳ್ವಿಕೆಗೆ ಸೇರಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಕರ್ನಾಟಕ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿಸಲಾಯಿತು. 

ಏಕೀಕರಣಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನ
ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ 25-12-1924ರಂದು, ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.

ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯದ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ. ಎ. ಸಲ್ಡಾನ, ಎ. ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬಯಿ ವಿಧಾನ ಸಭೆಯಲ್ಲಿ 1919ರಲ್ಲಿ ವಿ. ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ಆದರೆ, ಅದೂ ತಿರಸ್ಕೃತವಾಯಿತು. 1926ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಏಕೀಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ನೀಡಿ ಸರ್ಕಾರ ಠರಾವನ್ನು ತಿರಸ್ಕರಿಸಿತು.

ಕೊನೆಗೆ ಮುಹೂರ್ತ ಕೂಡಿ ಬಂದಿದ್ದು 1938ರ ಮೇ ತಿಂಗಳ ಮೊದಲ ವಾರ. ಆಗ ನಡೆದ ಮುಂಬಯಿ ಶಾಸನ ಸಭೆ ಕರ್ನಾಟಕ ಏಕೀಕರಣ ಗೊತ್ತುವಳಿಯನ್ನು ಸ್ವೀಕರಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿ. ಜಿ. ಖೇರ್, ಸರ್ ಸಿದ್ದಪ್ಪ ಕಂಬಳಿ, ವಿ. ಎನ್. ಜೋಗ್ ಗೊತ್ತುವಳಿಯನ್ನು ಅನುಮೋದಿಸಿದರು. ಆದರೆ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾಗಿದ್ದರಿಂದ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ.

ಸಮಗ್ರ ಕರ್ನಾಟಕದ ಕನಸು
1944ರಲ್ಲಿ ಧಾರವಾಡದಲ್ಲಿ ನಡೆದ 9ನೆಯ ಕರ್ನಾಟಕ ಏಕೀಕರಣ ಪರಿಷತ್ತು ಸಮಾವೇಶದಲ್ಲಿ ಸ್ವಾಗತಾಧ್ಯಕ್ಷರಾಗಿದ್ದ ಎಸ್. ಎಸ್. ಮಳೀಮಠ್, ಕರ್ನಾಟಕ ಏಕೀಕರಣವೆಂದರೆ, ಬ್ರಿಟಿಷ್ ಕರ್ನಾಟಕ ಪ್ರಾಂತಗಳಷ್ಟೇ ಅಲ್ಲ, ಸಂಸ್ಥಾನಗಳೂ ಸೇರಿದಂತೆ ಸಮಗ್ರ ಕರ್ನಾಟಕದ ಏಕೀಕರಣ ಎಂದು ಸಾರಿದರು.

1946ರಲ್ಲಿ ದಾವಣಗೆರೆಯಲ್ಲಿ ನಡೆದ ಕರ್ನಾಟಕಸ್ಥರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ಆಧಿಪತ್ಯದ ಕೃಷಿ ಮಂತ್ರಿ ಎಂ. ಪಿ. ಪಾಟೀಲರು 'ಭಾರತಕ್ಕೆ ಸ್ವಾತಂತ್ರ್ಯವು ಹೇಗೋ ಹಾಗೆ ಕರ್ನಾಟಕಕ್ಕೆ ಸ್ವಾಯತ್ತತೆ' ಎಂದು ಘೋಷಿಸಿದರು. ಕರ್ನಾಟಕ ಏಕೀಕರಣಕ್ಕೆ ಕೆಲವು ಸಂಸ್ಥಾನಿಕರು ಅಡ್ಡಿಯಾಗಿದ್ದಾರೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋ. ಚೆನ್ನಬಸಪ್ಪ 'ಸಾಧ್ಯವಾದರೆ ಮೈಸೂರನ್ನು ಒಳಗೊಂಡು, ಅಗತ್ಯವಾದರೆ ಅದನ್ನು ಬಿಟ್ಟು ಕರ್ನಾಟಕ ಏಕೀಕರಣವಾಗಬೇಕು' ಎಂಬ ಗೊತ್ತುವಳಿ ಮಂಡಿಸಿದರು. 

ಆದರೆ, ಕೆಂಗಲ್ ಹನುಮಂತಯ್ಯನವರು 'ಮೈಸೂರನ್ನು ಒಳಗೊಂಡು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು' ಎಂದು ಗೊತ್ತುವಳಿಗೆ ತಿದ್ದುಪಡಿ ತಂದರು. ಗೊತ್ತುವಳಿಯನ್ನು ಜಾರಿಗೆ ತರಲು ಎಂ. ಪಿ. ಪಾಟೀಲ, ಎಸ್. ನಿಜಲಿಂಗಪ್ಪ ಮತ್ತು ಕೆ. ಬಿ. ಜಿನರಾಜ ಹೆಗ್ಗಡೆ ಅವರಿದ್ದ ಸಮಿತಿ ರಚನೆಯಾಯಿತು.

ಸ್ವತಂತ್ರ ರಾಜ್ಯದತ್ತ...
1947ರ ಮುಂಬಯಿ ಶಾಸನ ಸಭೆಯಲ್ಲಿ ರೋಣದ ಅಂದಾನಪ್ಪ ದೊಡ್ಡಮೇಟಿ ಅವರು ಪ್ರತ್ಯೇಕ ಕರ್ನಾಟಕ ಪ್ರಾಂತ್ಯ ರಚನೆಗೆ ಒತ್ತಾಯಿಸಿ ಖಾಸಗಿ ಗೊತ್ತುವಳಿ ಮಂಡಿಸಿದರು. ಕೆಲವು ತಿದ್ದುಪಡಿಗಳೊಂದಿಗೆ ಗೊತ್ತುವಳಿಯು 60 ಮತಗಳನ್ನು ಪಡೆದು ಸ್ವೀಕೃತವಾಯಿತು. ವಿರುದ್ಧ ಬಂದದ್ದು ಕೇವಲ ಆರು ಮತಗಳು. ಮದ್ರಾಸ್ ಶಾಸನ ಸಭೆಯಲ್ಲಿಯೂ ಡಾ. ಪಿ. ಸುಬ್ಬರಾಯನ್ ಭಾಷಾವಾರು ಪ್ರಾಂತ್ಯ ರಚನೆಯ ಸಂಬಂಧ ಮಂಡಿಸಿದ ಗೊತ್ತುವಳಿ ಸ್ವೀಕೃತವಾಯಿತು.

ಸ್ವತಂತ್ರ ಭಾರತದ ಸಂವಿಧಾನದ ರಚನೆಗೆ ಸೇರಿದ್ದ ಘಟನಾ ಸಮಿತಿಯ ಮೇಲೂ ಭಾಷಾವಾರು ಪ್ರಾಂತ್ಯ ರಚನೆಗೆ ಒತ್ತಡ ಹೆಚ್ಚಿತು. ಅಂದಿನ ಘಟನಾ ಸಮಿತಿಯ ಸಭೆಯಲ್ಲೇ ಭಾಷಾವಾರು ಪ್ರಾಂತ್ಯ ರಚನೆ ಕುರಿತು ವರದಿ ಸಿದ್ಧಪಡಿಸಲು ಉಪ ಸಮಿತಿಯೊಂದರ ರಚನೆಯಾಯಿತು.

1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾಯಿತು. ಆದರೆ, ಭಾರತ ಒಕ್ಕೂಟದ ಜೊತೆ ಮೈಸೂರು ಸಂಸ್ಥಾನ ಸೇರ್ಪಡೆಯಾಗಿದ್ದು 1947ರ ಅಕ್ಟೋಬರ್ 24ರಂದು. ಹೈದರಾಬಾದ್ ಕರ್ನಾಟಕದ ಸೇರ್ಪಡೆ 1948ರ ಸೆಪ್ಟೆಂಬರ್ 17ರಂದು. 

1948ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು, ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್. ಕೆ. ಧರ್ ಅಧ್ಯಕ್ಷತೆಯಲ್ಲಿ ಆಯೋಗ ನೇಮಿಸಿತ್ತು. ಆದರೆ, ವರದಿ ಭಾಷಾವಾರು ಪ್ರಾಂತ್ಯ ರಚನೆ ವಿರುದ್ಧವಾಗಿ ಬಂತು. 

ಕರ್ನಾಟಕ ಏಕೀಕರಣ ಪರಿಷತ್ತು
ನ್ಯಾಯಮೂರ್ತಿ ಧರ್ ಆಯೋಗದ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಸಮಿತಿಯಲ್ಲಿದ್ದ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಪಟ್ಟಾಭಿರಾಮಯ್ಯ ಕೂಡಾ ಆಯೋಗದ ಶಿಫಾರಸುಗಳನ್ನೇ ಎತ್ತಿ ಹಿಡಿದರು. ಇದನ್ನು ಖಂಡಿಸಿ ರಾಜ್ಯದ ಎಲ್ಲೆಡೆ ಸಭೆ, ಸಮಾರಂಭ ಮತ್ತು ಸಮ್ಮೇಳನಗಳು ನಡೆದವು. ಕಾಂಗ್ರೆಸ್ ನಾಯಕರಿಂದ ಕರ್ನಾಟಕ ಏಕೀಕರಣ ಸಾಧ್ಯವಾಗದು ಎಂಬ ಅಭಿಪ್ರಾಯದಿಂದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಸ್ಥಾಪಿತವಾಗಿ, ಏಕೀಕರಣಕ್ಕೆ ಹೊಸ ತಿರುವು ಬಂದಿತು.

ಈ ಮಧ್ಯೆ ಆಂಧ್ರ ಪ್ರಾಂತ ರಚನೆಗೆ ಒತ್ತಾಯಿಸಿ, 1951ರ ಆಗಸ್ಟ್‌ನಲ್ಲಿ ಪೊಟ್ಟಿ ಶ್ರೀರಾಮುಲು ತಿರುಪತಿಯಲ್ಲಿ 37 ದಿನಗಳ ಉಪವಾಸ ಮಾಡಿದರು. ನಂತರ ಎರಡನೆಯ ಬಾರಿಗೆ ಆಮರಣಾಂತ ಉಪವಾಸಕ್ಕೆ ಕೈಹಾಕಿದ ಪೊಟ್ಟಿ ಶ್ರೀರಾಮುಲು, 58 ದಿನಗಳ ಉಪವಾಸ ಮಾಡಿ ನಿಧನರಾದರು. ಇದರಿಂದ ಎಚ್ಚೆತ್ತ ಲೋಕಸಭೆ, ಮದರಾಸ್ ನಗರವನ್ನು ಬಿಟ್ಟು ಆಂಧ್ರ ಪ್ರಾಂತ ರಚನೆಗೆ ನಿರ್ಧರಿಸಿತು. ಆಂಧ್ರ ಪ್ರಾಂತಕ್ಕೆ ಸೇರಿಸಬೇಕೆಂಬ ವಾದ ಇದ್ದ ಬಳ್ಳಾರಿ ತಾಲ್ಲೂಕಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ಸಲ್ಲಿಸುವಂತೆ ರಾಷ್ಟ್ರಪತಿಗಳು ಹೈದರಾಬಾದ್‌ನ ಮುಖ್ಯ ನ್ಯಾಯಾಧೀಶ ಎಲ್. ಎಸ್. ಮಿಶ್ರಾ ಅವರಿಗೆ ಜವಾಬ್ದಾರಿ ಕೊಟ್ಟಿತು. 

ಆಂಧ್ರಕ್ಕಿಂತ ಕರ್ನಾಟಕದ ಪರ 90 ಮನವಿಗಳು ಹೆಚ್ಚಾಗಿ ಬಂದವು. ಜೊತೆಗೆ, ಕೊನೆಯ ಘಳಿಗೆಯಲ್ಲಿ ಕರ್ನಾಟಕದ ಖ್ಯಾತ ಇತಿಹಾಸ ತಜ್ಞ ಆರ್. ಎಸ್. ಪಂಚಮುಖಿ ಅವರ ಅಭಿಪ್ರಾಯವೂ ರಾಜ್ಯದ ಪರವಾಗಿಯೇ ಬಂದಿದ್ದರಿಂದ, ಬಳ್ಳಾರಿ ತಾಲ್ಲೂಕನ್ನು ಕರ್ನಾಟಕಕ್ಕೇ ಸೇರಿಸಲು ಮಿಶ್ರಾ ಶಿಫಾರಸು ಮಾಡಿದರು.

ಹುಬ್ಬಳ್ಳಿ ಗೋಲಿಬಾರ್
ಈ ಸಂದರ್ಭದಲ್ಲೇ, ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ, ಶಂಕರಗೌಡ ಪಾಟೀಲರು 28-03-1953ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. 19-04-1953ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದ ವಿಷಯ ತಿಳಿದ ಕರ್ನಾಟಕ ಏಕೀಕರಣ ಕಾರ್ಯಕರ್ತರು ಬೆಳಗಿನಿಂದಲೇ ಗುಳಕವ್ವನ ಕಟ್ಟೆ ಮೈದಾನದಲ್ಲಿ ಗುಂಪುಗೂಡಿದರು. ಮೊದಮೊದಲು ಶಾಂತಿಯುತವಾಗಿದ್ದ ಪ್ರತಿಭಟನೆ ಕ್ರಮೇಣ ಉಗ್ರವಾಯಿತು. ಗುದ್ಲೆಪ್ಪ ಹಳ್ಳಿಕೇರಿ ಅವರ ಜೀಪಿಗೆ ಬೆಂಕಿ ಹಚ್ಚಿದರು. ಪೊಲೀಸರ ನಿಯಂತ್ರಣ ತಪ್ಪಿದಾಗ ಲಾಠೀ ಚಾರ್ಜ್ ಅಲ್ಲದೆ, ಗೋಲೀಬಾರ್ ಕೂಡಾ ಮಾಡಲಾಯಿತು. ಗಲಭೆಗೆ ಕಾರಣಕರ್ತರೆಂದು ಬಂಧಿತರಾದವರ ವಿಚಾರಣೆ ನಡೆಯಿತು. ಆಗ ಸ್ಥಾನಬದ್ಧತಾ ಕಾನೂನಿನ ಅಡಿಯಲ್ಲಿ ಬಂಧಿತರಾಗಿದ್ದವರ ಪರ ವಾದಿಸಿದವರು ಮಾಜಿ ಮುಖ್ಯಮಂತ್ರಿ ದಿ. ಎಸ್. ಆರ್. ಬೊಮ್ಮಾಯಿ. 

ಏಕೀಕರಣಕ್ಕೆ ಹೆಚ್ಚಿದ ಒತ್ತಡ
ಹುಬ್ಬಳ್ಳಿ ಗಲಭೆಯ ನಂತರ, ಮಿಶ್ರಾ ವರದಿ ಸ್ವೀಕೃತವಾಗಿ ಆಂಧ್ರ ಪ್ರದೇಶದ ರಚನೆ ಖಚಿತವಾಯಿತು. ಕಾಂಗ್ರೆಸ್ ನಾಯಕರನ್ನೇ ನಂಬಿ ಕೂತರೆ ಕರ್ನಾಟಕ ಏಕೀಕರಣ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದ್ದ ಕಾಂಗ್ರೆಸ್ಸೇತರ ಪಕ್ಷದ ಕೆಲವು ಮುಖಂಡರು 28-05-1953ರಂದು ದಾವಣಗೆರೆಯಲ್ಲಿ ಸಭೆ ಸೇರಿ, 'ಕರ್ನಾಟಕ ರಾಜ್ಯ ನಿರ್ಮಾಣ ಮಾಡುವುದು ಕನ್ನಡಿಗರ ಜನ್ಮಸಿದ್ಧ ಹಕ್ಕು' ಎಂಬ ಘೋಷಣೆಯೊಂದಿಗೆ, ಮಾಜಿ ಸಂಸದ ದಿ. ಅಳವಂಡಿ ಶಿವಮೂರ್ತಿ ಸ್ವಾಮಿ ಮತ್ತು ಕೆ. ಆರ್. ಕಾರಂತರ ನೇತೃತ್ವದಲ್ಲಿ 'ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಏಕೀಕರಣ ಹೋರಾಟಕ್ಕೆ ಜನಾಂದೋಲನದ ಸ್ವರೂಪ ನೀಡುವಲ್ಲಿ ಪರಿಷತ್ತು ಯಶ್ವಸಿಯಾಯಿತು. 1953ರ ಅಕ್ಟೋಬರ್ ಒಂದರಂದು ಆಂಧ್ರಪ್ರದೇಶ ರಚನೆಯಾದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆ ಮೈಸೂರು ಸಂಸ್ಥಾನದಲ್ಲಿ ವಿಲೀನಗೊಂಡಿತು.

ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿದಾಗ, ಕೇಂದ್ರ ಸರ್ಕಾರ 29-12-1953ರಂದು ರಚಿಸಿದ್ದ ಫಜಲ್ ಆಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗ ಕರ್ನಾಟಕ ರಾಜ್ಯ ರಚನೆಯ ಅಗತ್ಯತೆಯನ್ನು ಎತ್ತಿ ಹಿಡಿಯಿತು. ಅದರ ಕರಡು ವರದಿಯಲ್ಲಿ ಇಡಿಯಾಗಿ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸಲು ಶಿಫಾರಸು ಮಾಡಿತ್ತು. ಅದನ್ನು ವಿರೋಧಿಸಿ, ಬಳ್ಳಾರಿ ಜಿಲ್ಲೆಯಾದ್ಯಂತ ತುಂಗಭದ್ರಾ ನದಿ ನೀರು ಹೋರಾಟ ನಡೆಯಿತು. ರಾಜ್ಯ ಪುನರ್ವಿಂಗಡಣಾ ಆಯೋಗವು ಹಿಂದಿನ ವರದಿಗಳನ್ನು ಪರಿಶೀಲಿಸಿ, ಬಂದ ಸಾವಿರಗಟ್ಟಲೆ ಮನವಿಗಳ ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ 1955ರ ಅಕ್ಟೋಬರ್ 10ರಂದು ತನ್ನ ವರದಿಯನ್ನು ಸಲ್ಲಿಸಿತು.

ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯ ಬಗ್ಗೆ ಸಂಸತ್ತು 1956ರ ಜನವರಿ 19ರಂದು ಚರ್ಚಿಸಿ, 1956ರ ಮಾರ್ಚ್ 19ರಂದು ವಿಧೇಯಕ ಪ್ರಕಟಿಸಿತು. ಅದರ ಪ್ರಕಾರ 1956ರ ನವೆಂಬರ್ 1ರಂದು ಕರ್ನಾಟಕ (ಆಗ ಮೈಸೂರು) ರಾಜ್ಯ ಅಸ್ತಿತ್ವಕ್ಕೆ ಬರಲಿತ್ತು. ಆಗ ಈ ಪ್ರದೇಶಗಳು ಹೊಸ ರಾಜ್ಯದಲ್ಲಿ ಸೇರ್ಪಡೆಯಾಗಬೇಕಿತ್ತು: 

1. ಇಡಿಯಾಗಿ ಮೈಸೂರು ರಾಜ್ಯ.
2. ಮುಂಬಯಿ ರಾಜ್ಯದ ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ (ಚಾಂದಘಡ ತಾಲ್ಲೂಕನ್ನು ಬಿಟ್ಟು) ಜಿಲ್ಲೆಗಳು.
3. ಹೈದರಾಬಾದ್ ರಾಜ್ಯದ ಗುಲಬರ್ಗಾ ಜಿಲ್ಲೆ (ಕೊಡಂಗಲ್ ಮತ್ತು ತಾಂಡೂರು ತಾಲ್ಲೂಕುಗಳನ್ನು ಬಿಟ್ಟು), ರಾಯಚೂರು ಜಿಲ್ಲೆ (ಆಲಂಪುರ ಮತ್ತು ಗದ್ವಾಲ್ ತಾಲ್ಲೂಕುಗಳನ್ನು ಬಿಟ್ಟು) ಮತ್ತು ಬೀದರ್ ಜಿಲ್ಲೆಯ ಬೀದರ್, ಭಾಲ್ಕಿ, ಔರಾದ್ (ಸಂತಪುರ) ಮತ್ತು ಹುಮನಾಬಾದ್ ತಾಲ್ಲೂಕುಗಳು.
4. ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲ್ಲೂಕು ಮತ್ತು ಅಮೀನ್ ದ್ವೀಪಗಳನ್ನು ಬಿಟ್ಟು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು.
5. ಕೊಡಗು ರಾಜ್ಯ.

ಈಡೇರಿದ ಕನಸು
ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಕರುನಾಡು ಟಿಪ್ಪು ಸುಲ್ತಾನ್‌ನ ಮರಣದ ನಂತರ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹಲವಾರು ಪ್ರಾಂತ್ಯಗಳಾಗಿ ವಿಭಜನೆಯಾಗಿ ವಿವಿಧ ಭಾಷೆಗಳ ಪ್ರಾಂತ್ಯಗಳಲ್ಲಿ ಇಲ್ಲವಾಗಿತ್ತು. ಈಗ ಕನ್ನಡಿಗರನ್ನೊಳಗೊಂಡ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬರುತ್ತದೆಂಬ ಸಂತಸದ ಜೊತೆಗೆ, ಇದಕ್ಕಾಗಿ ಹೋರಾಡಿದ ಹಿರಿಯ ಜೀವಗಳು ಹಂಬಲಿಸಿದಂತೆ, ಪೂರ್ತಿ ಏಕೀಕರಣ ಸಾಧ್ಯವಾಗಲಿಲ್ಲ. 

ಏಕೆಂದರೆ, ಕಾಸರಗೋಡು ಕೈಬಿಟ್ಟಿತ್ತು. ಅಕ್ಕಲಕೋಟೆ, ಸೊಲ್ಲಾಪುರಗಳು ಹೊರಗೇ ಉಳಿದಿದ್ದವು. ನೀಲಗಿರಿ ಕೂಡಾ ದಕ್ಕಲಿಲ್ಲ. ಏಕೀಕರಣದ ನಂತರವೂ ಪ್ರಾಚೀನ ಕಾಲದಿಂದ ಇದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿತು. ಕೊನೆಗೂ, ಸಾಕಷ್ಟು ಒತ್ತಡದ ನಂತರ, 1973 ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

ಏನೇ ಆದರೂ, ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು 1956ರ ನವೆಂಬರ್ 1ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದಿದ್ದು ಒಂದು ಐತಿಹಾಸಿಕ ಹೋರಾಟದ ಫಲ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಶತಮಾನಗಳ ಸಂಕೋಲೆ ಕಳೆದುಕೊಂಡು ಎಲ್ಲ ರೀತಿಯಿಂದ ಒಂದಾಯಿತು. ಏಕೀಕರಣದ ಕನಸು ಈಡೇರುವ ಮೂಲಕ, ಕನ್ನಡಿಗರ ಭಾವನಾತ್ಮಕವಾಗಿಯೂ ಒಂದಾದರು. ಸಾಂಸ್ಕೃತಿಕ ಐಕ್ಯತೆಗೂ ಇಂಬು ದೊರೆಯಿತು. 

ಇಂಥದೊಂದು ಕನಸನ್ನು ನನಸು ಮಾಡಲು ಹೋರಾಡಿದ ಎಲ್ಲರ ತ್ಯಾಗ ಮತ್ತು ಬಲಿದಾನದ ಫಲ ಈ ನಮ್ಮ ಹೆಮ್ಮೆಯ ಕರ್ನಾಟಕ. ಆ ಸ್ಫೂರ್ತಿ ಅಳಿಯದಿರಲಿ. ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ಬೇಗ ಮೈದಾಳಲಿ. 

ಸಿರಿಗನ್ನಡಂಗೆಲ್ಗೆ!

ಕೃಪೆ: ಶ್ರೀ ಚಾಮರಾಜ ಸವಡಿ 

ಕರ್ನಾಟದ ಏಕೀಕರಣ :
ಬಹಳಷ್ಟೂ ನಮ್ಮ ಕನ್ನಡಿಗರಿಗೆ ಗೊತ್ತಿಲ್ಲ ಕರ್ನಾಟದ ಏಕೀಕರಣ ಅಂದರೆ ಏನು, ಅನೇಕ ಕಡೆ ಸುವರ್ಣ ಸಂಭ್ರಮ ಆಗುತ್ತಿದೆ, ಗಲ್ಲಿ ಗಲ್ಲಿಗಳಲ್ಲಿ ಸಮಾರಂಭ ನಡೆಯುತ್ತಿದೆ. ಅದೇ ಹಾಡು-ಕುಣಿತ ಮತ್ತು ಕೆಲವು ರಾಜಕೀಯ ನಾಯಕರ ಮತ್ತು ಉಟ್ಟು ಹೋರಾಟಗಾರಾರ ಕಿವಿಗೆ ಅಪ್ ಪಳಿಸುವ ಭಾಷಣಗಳು. ಆದರೆ ಇದಕ್ಕೆ ನಿಜಕ್ಕೂ ಹೋರಾಡಿದ, ಭಗೀರಥ ಪ್ರಯತ್ನವನ್ನು ಮಾಡಿದ ಶ್ರೀ ಆಲೂರರ ಸಾಧನೆ ನಮ್ಮ ಇಂದಿನ ಜನಾಂಗಕ್ಕೆ ತಿಳಿಯದಿರುವುದು ದುಃಖದ ಸಂಗತಿ. ಉದ್ದಗಲಕ್ಕೂ ಹಂಚಿಹೋಗಿದ್ದ ನಮ್ಮ ರಾಜ್ಯವನ್ನು ಒಂದು ಮಾಡಿದ ಸಾಧನೆ ಕಡಿಮೆಯೇ, ಯಾಕೆ ನಾವು ಇವರನ್ನು ಸ್ಮರಿಸುತ್ತಿಲ್ಲ, ಯಾಕೆ ನಮ್ಮ ಶಿಕ್ಷಣದಲ್ಲಿ ಇವರ ಪಾಠವಿಲ್ಲ ?? ಎಲ್ಲೆಲ್ಲಿ ತೇಪೆಗಳಾಗಿದ್ದವು ಅಂತ ನಮ್ಮ ಜನಕ್ಕೆ ಗೊತ್ತೆ ??

ಬೆಂಗಳೂರು ಗ್ರಾಮಂತರ, ಮಂಡ್ಯ, ಕೋಲಾರ, ತುಮಕೂರು. ಮೈಸೂರುಗಳನ್ನು ಒಳಗೊಂಡ ಮೈಸೂರು ಅರಸರ ಪ್ರಾಂತ್ಯ.
ಬ್ರಿಟಿಷ್ ಆಡಳಿತದಲ್ಲಿ ಇದ್ದ ಬೆಂಗಳೂರು(ಕಂಟೋನ್ಮೆಂಟ್)
ಬ್ರಿಟಿಷ್ ಆಡಳಿತ ಆದರೆ ಮುಂಬೈ ಪ್ರೆಸಿಡೆನ್ಸಿದಲ್ಲಿ ಇದ್ದ ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ವಿಜಾಪುರ. ಉತ್ತರ ಮತ್ತು ದಕ್ಶಿಣ ಸೊಲ್ಲಾಪುರ ಮತ್ತು ಮಂಗಳವಾಡೆ.
ಬ್ರಿಟಿಷ್ ಮದ್ರಾಸ್ ಪ್ರಾಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು, ಬಳ್ಳಾರಿ, ಪೆನೆಗೊಂಡ, ನೀಲಗಿರಿ, ಕೊಳ್ಳೆಗಾಲ, ಹಿಂದೂಪುರ, ಕಲ್ಯಾಣದುರ್ಗ, ಪೆನಗೋಂಡ, ಹೊಸೂರು, ಮಡಕಶಿರಾ ಮತ್ತು ತಾಳವಾಡಿ.
ಕೊಡಗು
ಹೈದಾರಬಾದ್ ಸಂಸ್ಥಾನಕ್ಕೆ ಸೇರಿದ ಬೀದರ್, ರಾಯಚೂರು ಮತ್ತು ಗುಲ್ಬರ್ಗ
ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ ಷಾಪುರ, ಶಿರಹಟ್ಟಿ, ದೊಡ್ದವಾಡ.
ಮೀರಜ್ ಸಂಸ್ಥಾನಕ್ಕೆ ಸೇರಿದ ಲಕ್ಶ್ಮೇಶ್ವರ
ಕಿರಿಯ ಮೀರಜ್ ಸಂಸ್ಥಾನಕ್ಕೆ ಸೇರಿದ ಗುಡಗೇರಿ
ಹಿರಿಯ ಕುರುಂದ್ ನಾಡ್
ವಡಗಾಂವ್
ಔಂದ್ ಸಂಸ್ಥಾನಕ್ಕೆ ಸೇರಿದ ವಿಜಾಪುರದ ಗುಣದಾಳು
ರಾಮದುರ್ಗ ಸಂಸ್ಥಾನ
ಜಮಖಂಡಿ ಸಂಸ್ಥಾನಕ್ಕೆ ಸೇರಿದ ಕುಂದಗೋಳ, ಚಿಪ್ಪಲಕಟ್ಟಿ ೧೫) ಮುಧೋಳ ಸಂಸ್ಥಾನಕ್ಕೆ ಸೇರಿದ ಮುಧೊಳ್
ಸೊಂಡುರು ಸಂಸ್ಥಾನಕ್ಕೆ ಸೇರಿದ ಸೊಂಡುರು
ಜತ್ ಸಂಸ್ಥಾನಕ್ಕೆ ಸೇರಿದ ಜತ್ ಜಿಲ್ಲೆ
ಸವಣೂರು ಸಂಸ್ಥಾನಕ್ಕೆ ಸೇರಿದ ಸವಣೂರು ಜಿಲ್ಲೆ
ಅಕ್ಕಲಕೋಟೆಯ ಸಂಸ್ಥಾನಕ್ಕೆ ಸೇರಿದ ಅಕ್ಕಲಕೋಟೆ ಜಿಲ್ಲೆ ಹೀಗೆ ಅನೇಕರ ಕೈಗಳಲ್ಲಿ ಹಂಚಿಹೊಗಿದ್ದ ಕರುನಾಡನ್ನು ಒಂದು ಮಾಡಿದ್ದು ನಿಜಕ್ಕೂ ಮಾಯೆಯೆ ಸರಿ, ಕನ್ನಡಿಗರ ಹಿತ ರಕ್ಸಿಸುವ ಒಂದು ರಾಜ್ಯವಿರಲಿಲ್ಲ, ನಮ್ಮ ಜನರನ್ನು ಆಳುವ ಪ್ರಭುಗಳು ಇತರ ಭಾಷಿಕರಾಗಿದ್ದು, ನಾವು ಅನಾಥಪ್ರಜ್ನೆ ಅನುಭವಿಸುತ್ತ ಇದ್ದೆವೂ. ಏಕೀಕರಣಕ್ಕೆ ಅಡ್ದಿ ಆತಂಕಗಳು ಬರಲಿಲ್ಲ್ವವೇ ?? ಬಂಡಾಯದ ಧ್ವನಿ ಕೇಳಿಬಂದವೂ, ಆದರೂ ದೃತಿಗೆಡದೆ ಕನ್ನಡದ ಹಿತಕ್ಕೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯದ ಆ ಚೇತನ ನಮ್ಮ ಇಂದಿನ ಪೀಳಿಗೆಗೆ ಮಾದರಿ.
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com