ಅನುಕೂಲಸ್ಥರ ದುರವಸ್ಥೆ !
ಅವರಿಗೇನ್ರೀ ಕಡಿಮೆ? ಅವರು ಅನುಕೂಲಸ್ಥರು. ಅವರು ಕೈ ಬೆರೆಳನ್ನೂ ಎತ್ತಬೇಕಾಗಿಲ್ಲ. ಅವರಿಗೆ ಕೈಗೊಬ್ಬ ಆಳು, ಕಾಲಿಗೊಬ್ಬ ಆಳು ಎನ್ನುವ ಮಾತುಗಳನ್ನು ನಾವೆಲ್ಲಾ ಕೇಳಿದ್ದೇವಲ್ಲವೇ? ಆದರೆ ಅಂತಹ ಅನುಕೂಲಸ್ಥರ ದುರವಸ್ಥೆಯನ್ನು ವಿವರಿಸುವ ಕತೆಯೊಂದು ಇಲ್ಲಿದೆ. ಪುರಾತನ ರೋಮ್ ದೇಶದಲ್ಲಿ ಒಬ್ಬ ರಾಜರಿದ್ದರಂತೆ. ಅದು ಗುಲಾಮ ಪದ್ಧತಿ ಜಾರಿಯಲ್ಲಿದ್ದ ಕಾಲ. ಹಾಗಾಗಿ ರಾಜರ ಅರಮನೆಯಲ್ಲಿ ನೂರಾರು ಆಳುಗಳಿದ್ದರು. ಎಲ್ಲಾ ಕೆಲಸಗಳನ್ನೂ ಆಳುಗಳೇ ಮಾಡಿ ಮುಗಿಸುತ್ತಿದ್ದರು.
ರಾಜರು ಕಣ್ಸನ್ನೆ ಮಾಡಿದರೆ ಸಾಕಾಗುತ್ತಿತ್ತು. ಕೆಲಸಗಳೆಲ್ಲಾ ಆಗಿ ಹೋಗುತ್ತಿದ್ದವು. ಕಣ್ಸನ್ನೆ ಮಾಡುವುದಕ್ಕೆ ರಾಜರು ನಿಂತಿರಬೇಕಿರಲಿಲ್ಲ. ಕುಳಿತಿರಬೇಕಿರಲಿಲ್ಲ. ಮಲಗಿದ್ದರೂ ಸಾಕಿತ್ತು. ಹಾಗಾಗಿ ಆ ರಾಜರು ದಿನದ ಬಹುಪಾಲು ಸಮಯವನ್ನು ಮಲಗಿಯೇ ಕಳೆಯುತ್ತಿದ್ದರು. ಮಲಗಿದ್ದಲ್ಲಿಯೇ ಊಟ-ತಿಂಡಿಗಳು ನಡೆಯುತ್ತಿದ್ದವು. ಸಹಜವಾಗಿ ರಾಜರು ದಪ್ಪಗಾಗುತ್ತಾ ಹೋದರು. ದಪ್ಪಗಾಗಿ, ಆಗಿ, ಅವರು ಅನೇಕ ಕಾಯಿಲೆಗಳಿಗೆ ತುತ್ತಾದರು. ಯಾವ ವೈದ್ಯರ ಚಿಕಿತ್ಸೆಯೂ ಅವರ ಕಾಯಿಲೆಯನ್ನು ಗುಣ ಪಡಿಸಲಾರದೇ ಹೋದವು. ರಾಜರ ದೇಹಸ್ಥಿತಿ ಸುಧಾರಿಸಲಿಲ್ಲ. ವೈದ್ಯರ ಆರ್ಥಿಕ ಸ್ಥಿತಿ ಸುಧಾರಿಸಿತು!
ಕೊನೆಗೆ ರಾಜರ ಕಾಯಿಲೆ ಗುಣ ಪಡಿಸುತ್ತೇನೆಂದು ಹೇಳಿ ದೂರದೇಶದ ವೈದ್ಯರೊಬ್ಬರು ಬಂದರು. ಸದಾ ಮಲಗಿರುತ್ತಿದ್ದ ರಾಜರನ್ನು ನೋಡಿದ ವೈದ್ಯರು ಎಲ್ಲವನ್ನೂ ಅರ್ಥ ಮಾಡಿಕೊಂಡರು. ಸುತ್ತಮುತ್ತಲಿದ್ದ ರಾಜ ಪರಿವಾರದವರನ್ನೆಲ್ಲಾ ಹೊರಕ್ಕೆ ಕಳುಹಿಸಿದರು. ಕೋಣೆಯ ಬಾಗಿಲನ್ನು ಭದ್ರ ಪಡಿಸಿದರು. ತಮ್ಮ ಚೀಲದಿಂದ ಚೂಪಾದ ಚಾಕುವೊಂದನ್ನು ಹೊರ ತೆಗೆದು ರಾಜರೇ, ನಿಮ್ಮ ದೇಹದ ಕೊಬ್ಬು ತುಂಬಿರುವ ಭಾಗಗಳನ್ನೆಲ್ಲ ಕೊಚ್ಚಿ ತೆಗೆಯುತ್ತೇನೆ. ನಿಮ್ಮನ್ನು ಸಣ್ಣ ಮಾಡುತ್ತೇನೆ. ರಕ್ತಪಾತ ಆಗಬಹುದು. ನಿಮಗೆ ನೋವಾಗಬಹುದು.
ಆದರೆ ಅದೇ ನನ್ನ ಚಿಕಿತ್ಸಾ ವಿಧಾನ ಎಂದು ರಾಜರ ಬಳಿಗೆ ಚಾಕು ತೋರಿಸುತ್ತಾ ಧಾವಿಸಿದಾಗ ರಾಜರು ಗಾಬರಿಯಾದರು. ದಡಬಡಿಸಿ ಎದ್ದರು. ವೈದ್ಯರಿಂದ ದೂರ ಓಡತೊಡಗಿದರು. ಮುಂದೆ ಮುಂದೆ ರಾಜರು, ತಮ್ಮ ಹಿಂದೆ ಹಿಂದೆ ಅವರನ್ನು ಅಟ್ಟಿಸಿಕೊಂಡು ಬರುತ್ತಿದ್ದ ವೈದ್ಯರು, ಇಬ್ಬರೂ ಓಡಿದ್ದೇ ಓಡಿದ್ದು. ಮೂರು ನಾಲ್ಕು ಗಂಟೆಗಳ ಕಾಲ ಈ ಓಡಾಟ ನಡೆಯಿತು. ಕೊನೆಗೆ ರಾಜರು ನಿಶ್ಶಕ್ತರಾಗಿ ಬೆವರು ಸುರಿಸುತ್ತ ಕುಸಿದು ಬಿದ್ದರು. ಆಗ ವೈದ್ಯರು ಚಾಕುವನ್ನು ಬಿಸಾಡಿದರು. ರಾಜರಿಗೆ ಕೈ ಮುಗಿದರು. ರಾಜರೇ, ನನ್ನನ್ನು ಕ್ಷಮಿಸಿಬಿಡಿ. ನಿಮಗೆ ವ್ಯಾಯಾಮವೇ ಇಲ್ಲದಿದ್ದರಿಂದ ನೀವು ದಪ್ಪಗಾಗಿದ್ದೀರಿ. ಈಗ ಮೂರು ನಾಲ್ಕು ಗಂಟೆ ನೀವು ಓಡಿದ್ದೀರಿ. ಬೆವರು ಸುರಿಸಿದ್ದೀರಿ.
ಒಂದಷ್ಟು ತೂಕವನ್ನೂ ಇಳಿಸಿಕೊಂಡಿದ್ದೀರಿ. ನೀವು ಇನ್ನು ಮುಂದೆ ತಿನ್ನುವುದನ್ನು ಕಡಿಮೆ ಮಾಡಿ, ಕೆಲಸವನ್ನು ಹೆಚ್ಚು ಹೆಚ್ಚು ಮಾಡಿ. ಒಂದೆರಡು ತಿಂಗಳುಗಳಲ್ಲಿ ನಿಮ್ಮ ಕಾಯಿಲೆ ವಾಸಿಯಾಗುತ್ತದೆ. ಆರೋಗ್ಯವಂತರಾಗುತ್ತೀರಿ. ನಾನು ಆಗಿಂದಾಗ್ಗೆ ನಿಮ್ಮನ್ನು ಬಂದು ನೋಡುತ್ತೇನೆ. ಚಾಕುವನ್ನು ತರುವುದಿಲ್ಲ. ಹೆದರಬೇಡಿ ಎಂದು ಹೇಳಿ ಕೋಣೆಯ ಬಾಗಿಲು ತೆರೆದರು. ಬೆವರು ಸುರಿಸುತ್ತಾ ನಿಂತಿದ್ದ, ಕೊಂಚ ಸಣ್ಣಗಾದಂತೆ ಕಾಣುತ್ತಿದ್ದ ರಾಜರನ್ನು ನೋಡಿ ಪರಿವಾರದವರು ಬೆರಗಾದರು. ರಾಜರು ಆ ವೈದ್ಯರಿಗೆ ಕೈ ತುಂಬ ಹಣ ಕೊಟ್ಟು ಕಳುಹಿಸಿದರು.
ಮುಂದೆ ವೈದ್ಯರ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದುದರಿಂದ ರಾಜರು ಆರೋಗ್ಯವಂತರಾದರಂತೆ. ಇದು ಅಂದಿನ ರಾಜರ ಕತೆಯಿರಬಹುದು. ಇಂದು ರಾಜರಿಲ್ಲದೆ ಇರಬಹುದು. ಆದರೆ ಅನುಕೂಲಸ್ಥರಾಗಿರುವ ಆಧುನಿಕ ರಾಜರುಗಳು ನಾವೆಲ್ಲ ಇದ್ದೇವೆ. ಆ ಕತೆಯಲ್ಲಿನ ವೈದ್ಯರು ಸೂಚಿಸಿದ ‘ಕಡಿಮೆ ತಿನ್ನಿ ಹೆಚ್ಚು ದುಡಿಯಿರಿ’ ಸೂತ್ರವನ್ನು ಪಾಲಿಸಿದರೆ ಅನುಕೂಲಸ್ಥರ ದುರವಸ್ಥೆ ಆಧುನಿಕ ರಾಜರಿಗೆ ಬರುವುದಿಲ್ಲ ಅಲ್ಲವೇ?
ಕೃಪೆ:ಎಸ್ ಷಡಕ್ಷರಿ.
ಸಂಗ್ರಹ: ವೀರೇಶ್ ಅರಸಿಕೆರೆ.
Shared in what's up group








Reyali nija
ReplyDelete